ನೆಲ್ಲೂರು(ಆಂಧ್ರ ಪ್ರದೇಶ): ನೆಲ್ಲೂರು ಜಿಲ್ಲೆಯಲ್ಲಿ ಬುಧವಾರ ಸಂಜೆ ಪಕ್ಷದ ಕಾರ್ಯಕರ್ತರ ನಡುವೆ ನಡೆದ ಗಲಾಟೆಯಿಂದ ಈಗಾಗಲೇ ಎಂಟು ಮಂದಿ ಸಾವನ್ನಪ್ಪಿದ್ದು ಆರು ಮಂದಿ ಗಾಯಗೊಂಡಿದ್ದರು. ಇದೀಗ ಈ ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ, ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರು "ಇದೊಂದು ದುಃಖಕರದ ಘಟನೆ. ಇದರ ಬಗ್ಗೆ ನನಗೆ ತುಂಬಾ ವಿಷಾದವಿದೆ" ಎಂದು ತಮ್ಮ ನೋವನ್ನು ಹೊರಹಾಕಿದ್ದಾರೆ.
ನೆಲ್ಲೂರು ಜಿಲ್ಲೆಯಲ್ಲಿ ನಡೆದ ಘಟನೆ ನಂತರ ಪ್ರಾಣ ಕಳೆದುಕೊಂಡ ಟಿಡಿಪಿ ಕಾರ್ಯಕರ್ತರ ಕುಟುಂಬದ ಸದಸ್ಯರನ್ನು ಭೇಟಿ ಮಾಡಿದ ಟಿಡಿಪಿ ನಾಯಕ ಎನ್ ಚಂದ್ರಬಾಬು ನಾಯ್ಡು ಅವರು ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂಪಾಯಿ ಆರ್ಥಿಕ ನೆರವು ಘೋಷಣೆ ಜೊತೆಗೆ, ಅವರ ಮಕ್ಕಳಿಗೆ ಎನ್‌ಟಿಆರ್ ಟ್ರಸ್ಟ್ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ನೀಡಲಾಗುವುದು ಎಂದಿದ್ದಾರೆ.
ಇನ್ನು, ಈ ಘಟನೆಗೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ ತಲಾ 50,000 ರೂಪಾಯಿ ಪರಿಹಾರವನ್ನು ಘೋಷಿಸಿದ್ದಾರೆ.
ಅಲ್ಲದೆ ಕಾರ್ಯಕರ್ತರು ಸಾವನ್ನಪ್ಪಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಸಂತಾಪ ಸೂಚಿಸಿದ್ದಾರೆ. ಜೊತೆಗೆ ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂಪಾಯಿ ಮತ್ತು ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ ಗಾಯಗೊಂಡ ಪ್ರತಿಯೊಬ್ಬರಿಗೂ 50 ಸಾವಿರ ರೂ. ನೀಡಲಾಗುವುದು ಎಂದು ಪ್ರಧಾನಿ ಕಚೇರಿ ಗುರುವಾರ ಟ್ವೀಟ್ ಮಾಡಿದೆ.
ಇದನ್ನೂ ಓದಿ; ಗಡಿ ಕ್ಯಾತೆ ಬಳಿಕ ಜಲ ತಂಟೆ: ಆಲಮಟ್ಟಿ ಜಲಾಶಯದ ಎತ್ತರಕ್ಕೆ ಮಹಾರಾಷ್ಟ್ರ ತಗಾದೆ