ಅಮರಾವತಿ (ಆಂಧ್ರ ಪ್ರದೇಶ): ಆಂಧ್ರ ಪ್ರದೇಶದ ಕೌಶಲ್ಯಾಭಿವೃದ್ಧಿ ಹಗರಣ ಆರೋಪ ಪ್ರಕರಣದಲ್ಲಿ ಟಿಡಿಪಿ ಅಧ್ಯಕ್ಷ ಮತ್ತು ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಹೈಕೋರ್ಟ್ನ ರಜಾಕಾಲದ ಪೀಠಕ್ಕೆ ಗುರುವಾರ ವರ್ಗಾಯಿಸಲಾಗಿದೆ. ಚಂದ್ರಬಾಬು ಪರ ವಕೀಲರ ಮಾಡಿದ ಮನವಿಗೆ ಸಮ್ಮತಿಸಿದ ನ್ಯಾಯಮೂರ್ತಿ ಸುರೇಶ್ ರೆಡ್ಡಿ ದಸರಾ ರಜೆಯಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ ಎಂದು ತಿಳಿಸಿದರು.
ಚಂದ್ರಬಾಬು ಕಳೆದ 40 ದಿನಗಳಿಂದ ಜೈಲಿನಲ್ಲಿದ್ದಾರೆ. ಜಾಮೀನು ಅರ್ಜಿ ವಿಚಾರಣೆ ಹೈಕೋರ್ಟ್ನಲ್ಲಿ ನಡೆಯುತ್ತಿದೆ. ಮುಂಬರುವ ದಸರಾ ರಜೆ ಹಿನ್ನೆಲೆಯಲ್ಲಿ ವಿಚಾರಣೆಯನ್ನು ರಜಾಕಾಲದ ಪೀಠಕ್ಕೆ ವರ್ಗಾವಣೆ ಮಾಡುವಂತೆ ವಕೀಲರು ಮನವಿ ಸಲ್ಲಿಸಿದ್ದರು. ಚಂದ್ರಬಾಬು ಆರೋಗ್ಯ ಸ್ಥಿತಿ ಕುರಿತು ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನೂ ರಜಾಕಾಲದ ಪೀಠದಲ್ಲಿ ನಡೆಸಲಾಗುವುದು ಎಂದು ನ್ಯಾಯಮೂರ್ತಿ ಸ್ಪಷ್ಟಪಡಿಸಿದರು. ಇದರ ವರದಿಯನ್ನು ರಜಾಕಾಲದ ಪೀಠಕ್ಕೆ ಸಲ್ಲಿಸುವಂತೆಯೂ ರಾಜಮಂಡ್ರಿ ಜೈಲಿನ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜೈಲಿನಲ್ಲಿ ಭದ್ರತೆ ಬಗ್ಗೆ ಚಂದ್ರಬಾಬು ಆತಂಕ: ರಾಜಮಹೇಂದ್ರವರಂ ಜೈಲಿನಲ್ಲಿರುವ ಚಂದ್ರಬಾಬು ಅವರನ್ನು ಜೈಲಾಧಿಕಾರಿಗಳು ಎಸಿಬಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ತಮ್ಮ ಸುರಕ್ಷತೆ ಹಾಗೂ ಭದ್ರತೆ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು. ಆಗ ನ್ಯಾಯಾಧೀಶರು, ಭದ್ರತೆಯ ಬಗ್ಗೆ ಅನುಮಾನಗಳಿದ್ದರೆ ಲಿಖಿತ ರೂಪದಲ್ಲಿ ತಿಳಿಸುವಂತೆ ಚಂದ್ರಬಾಬು ಅವರಿಗೆ ಸೂಚಿಸಿದರು. ಚಂದ್ರಬಾಬು ಬರೆದಿರುವ ಪತ್ರ ಹಾಗೂ ವೈದ್ಯಕೀಯ ವರದಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಜೈಲಾಧಿಕಾರಿಗಳಿಗೆ ನ್ಯಾಯಾಧೀಶರು ಆದೇಶಿಸಿದರು.
ನ.1ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ: ಚಂದ್ರಬಾಬು ಅವರ ನ್ಯಾಯಾಂಗ ಬಂಧನ ಅವಧಿಯನ್ನು ಎಸಿಬಿ ನ್ಯಾಯಾಲಯ ಮತ್ತೊಮ್ಮೆ ವಿಸ್ತರಿಸಿತು. ನವೆಂಬರ್ 1ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿದೆ. ಇದರ ಬೆನ್ನಲ್ಲೇ ಚಂದ್ರಬಾಬು ಪರ ವಕೀಲರು ವಿಜಯವಾಡ ಎಸಿಬಿ ನ್ಯಾಯಾಲಯಕ್ಕೆ ಮತ್ತೊಂದು ಅರ್ಜಿ ಸಲ್ಲಿಸಿದ್ದಾರೆ. ಕೇಂದ್ರ ಕಾರಾಗೃಹದಲ್ಲಿ ದಿನಕ್ಕೆ ಮೂರು ಬಾರಿ ಕಾನೂನಾತ್ಮಕ ಭೇಟಿ ಅವಕಾಶ ನೀಡಬೇಕೆಂದು ಮನವಿ ಮಾಡಿದ್ದಾರೆ. ಜೈಲಾಧಿಕಾರಿಗಳು ಭೇಟಿ ಅವಕಾಶ ನೀಡದೆ ತೊಂದರೆ ನೀಡುತ್ತಿದ್ದಾರೆ ಎಂದು ವಕೀಲರು ದೂರಿದ್ದಾರೆ.
ಚಂದ್ರಬಾಬು ಬಂಧನವು ಆಂಧ್ರಪ್ರದೇಶದಲ್ಲಿ ರಾಜಕೀಯ ಕಿತ್ತಾಟಕ್ಕೂ ಕಾರಣವಾಗಿದೆ. ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ಸರ್ಕಾರವು ದುರುದ್ದೇಶದಿಂದ ಚಂದ್ರಬಾಬು ಅವರನ್ನು ಬಂಧಿಸಿದೆ ಎಂದು ಟಿಡಿಪಿ ನಾಯಕರು ಆರೋಪಿಸಿದ್ಧಾರೆ. ಜಗನ್ ಸರ್ಕಾರದ ವಿರುದ್ಧ ಟಿಡಿಪಿ ಕಾರ್ಯಕರ್ತರು ರಾಜಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲದೇ, ಚಂದ್ರಬಾಬು ಬಂಧನವನ್ನು ನಟ, ಜನಸೇನಾ ಪಕ್ಷದ ನಾಯಕ ಪವನ್ ಕಲ್ಯಾಣ್ ಕೂಡ ಟೀಕಿಸಿದ್ದಾರೆ.
ಇದನ್ನೂ ಓದಿ: ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಬಂಧನ: ಆಂಧ್ರ ರಾಜ್ಯಾದ್ಯಂತ ಪ್ರವಾಸಕ್ಕೆ ಪತ್ನಿ ನಿರ್ಧಾರ