ನವದೆಹಲಿ: ಸರ್ಕಾರಿ ಆಸ್ಪತ್ರೆ, ಆರೋಗ್ಯ ಕೇಂದ್ರಗಳು ಮತ್ತು ಪಾಲಿಕ್ಲಿನಿಕ್ಗಳಲ್ಲಿ ಜೆನೆರಿಕ್ ಔಷಧಿಗಳನ್ನು ಮಾತ್ರ ನೀಡುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಖಾಸಗಿ ಕಂಪನಿಗಳ ಔಷಧಿಯನ್ನು ಇಲ್ಲಿಗೆ ಬರುವ ರೋಗಿಗಳಿಗೆ ಶಿಫಾರಸು ಮಾಡಬಾರದು. ಒಂದು ವೇಳೆ ನಿಯಮ ಮೀರಿದಲ್ಲಿ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಸರ್ಕಾರಿ ಸ್ವಾಮ್ಯದಲ್ಲಿ ನಡೆಯುವ ಆಸ್ಪತ್ರೆಗಳಲ್ಲಿ ಕೇಂದ್ರ ಸರ್ಕಾರದ ಆರೋಗ್ಯ ಯೋಜನೆಯಡಿ (ಸಿಜಿಎಚ್‌ಎಸ್) ಆರೋಗ್ಯ ಕೇಂದ್ರಗಳ ವೈದ್ಯರು ಜೆನೆರಿಕ್ ಔಷಧವನ್ನು ಮಾತ್ರ ರೋಗಿಗಳಿಗೆ ಸೂಚಿಸಬೇಕು. ಆಸ್ಪತ್ರೆಗಳಿಗೆ ವೈದ್ಯಕೀಯ ಪ್ರತಿನಿಧಿಗಳ (ಔಷಧ ಕಂಪನಿಗಳ ಪ್ರತಿನಿಧಿಗಳು) ಭೇಟಿಯನ್ನು ನಿಷೇಧಿಸಲಾಗಿದೆ. ಹಾಗೊಂದು ವೇಳೆ ಬರುತ್ತುದ್ದರೆ, ಅದನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರವು ವೈದ್ಯರಿಗೆ ಸಲಹೆ ನೀಡಿದೆ.
ಸರ್ಕಾರದ ಆದೇಶದಂತೆ ಸರ್ಕಾರಿ ಆಸ್ಪತ್ರೆಗಳು, ಸಿಜಿಎಚ್‌ಎಸ್ ಆರೋಗ್ಯ ಕೇಂದ್ರಗಳು ಮತ್ತು ಪಾಲಿಕ್ಲಿನಿಕ್‌ಗಳ ವೈದ್ಯರು ಕಾಲಕಾಲಕ್ಕೆ ಜೆನೆರಿಕ್ ಔಷಧಿಗಳನ್ನು ಮಾತ್ರ ನೀಡುವಂತೆ ಸೂಚನೆ ನೀಡಲಾಗಿದೆ. ಈ ನಿಯಮ ಪಾಲಿಸುವುದು ಕಡ್ಡಾಯವಾಗಿದೆ. ಇಲ್ಲದಿದ್ದರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸೇವೆಗಳ ಮಹಾನಿರ್ದೇಶಕ ಡಾ ಅತುಲ್ ಗೋಯೆಲ್ ಆದೇಶದಲ್ಲಿ ಎಚ್ಚರಿಸಿದ್ದಾರೆ.
ಡೈರೆಕ್ಟರ್ ಜನರಲ್ ಹೆಲ್ತ್ ಸರ್ವಿಸಸ್ (ಡಿಜಿಎಚ್‌ಎಸ್) ಹೊರಡಿಸಿದ ಆದೇಶದಂತೆ, ಕೇಂದ್ರ ಸರ್ಕಾರಿ ಆಸ್ಪತ್ರೆಗಳು/ ಸಿಜಿಹೆಚ್‌ಎಸ್ ವೆಲ್‌ನೆಸ್ ಸೆಂಟರ್/ ಪಾಲಿಕ್ಲಿನಿಕ್‌ನ ಎಲ್ಲಾ ವೈದ್ಯರು ಕಾಲಕಾಲಕ್ಕೆ ಜೆನೆರಿಕ್ ಔಷಧಿಗಳನ್ನು ಮಾತ್ರ ಶಿಫಾರಸು ಮಾಡಲು ಸೂಚಿಸಲಾಗಿದೆ. ಆದರೆ, ಕೆಲವು ಸಂದರ್ಭಗಳಲ್ಲಿ ವೈದ್ಯರು ಖಾಸಗಿ ಕಂಪನಿಗಳ ಔಷಧಿಗಳನ್ನು ಶಿಫಾರಸು ಮಾಡುತ್ತಿರುವುದು ಪತ್ತೆಯಾಗಿದೆ. ಹೀಗಾಗಿ ಸರ್ಕಾರ ಇದರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದೆ.
ಇದನ್ನೂ ಓದಿ: ವರಿಷ್ಠರಿಂದ ಪ್ರತಿಪಕ್ಷ ನಾಯಕರ ಆಯ್ಕೆ.. ಶೀಘ್ರವೇ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹೊಸಬರ ಆಯ್ಕೆ: ಪ್ರಹ್ಲಾದ್ ಜೋಶಿ
ಆಸ್ಪತ್ರೆ ಆವರಣಗಳಿಗೆ ಖಾಸಗಿ ಔಷಧಿ ಕಂಪನಿಗಳ ಪ್ರತಿನಿಧಿಗಳ ಭೇಟಿಯನ್ನು ಸಂಪೂರ್ಣವಾಗಿ ನಿಲ್ಲಿಸುವಂತೆ ಆದೇಶದಲ್ಲಿ ಸೂಚಿಲಾಗಿದ್ದು, ಹೊಸ ಔಷಧಿಯ ಕುರಿತು ಯಾವುದೇ ಮಾಹಿತಿಯನ್ನು ಇ-ಮೇಲ್ ಮೂಲಕ ಮಾತ್ರ ನೀಡಬಹುದಾಗಿದೆ ಎಂದು ತಿಳಿಸಿದೆ.
ಏನಿದು ಜೆನೆರಿಕ್ ಔಷಧ: ಸರ್ಕಾರಿ ನಿಯಂತ್ರಣದಲ್ಲಿರುವ ಸಂಸ್ಥೆಯಿಂದ ತಯಾರಿಸಲ್ಪಡುವ ಮತ್ತು ಯಾವುದೇ ಖಾಸಗಿ, ಏಕಸ್ವಾಮ್ಯ ಸಂಸ್ಥೆಯ ಸಹಭಾಗಿತ್ವ ಹೊಂದಿರದ ಔಷಧಿಯಾಗಿದೆ. ಇದನ್ನು ರೋಗ ಲಕ್ಷಣ ನಿವಾರಣೆ, ಅದರ ಚಿಕಿತ್ಸೆ, ಉಪಚಾರ ಮತ್ತು ನಿರೋಧನೆಗಾಗಿ ಉಪಯೋಗಿಸಲ್ಪಡುತ್ತದೆ. ಇದು ಬ್ರ್ಯಾಂಡ್ ಔಷಧಗಳಿಗೆ ಸಮನಾಗಿರುತ್ತದೆ. ಔಷಧ ಪ್ರಮಾಣ, ಶಕ್ತಿ, ಆಡಳಿತ, ಗುಣಮಟ್ಟ ಪ್ರಮಾಣವು ಬ್ರ್ಯಾಂಡ್ ಹೆಸರಿನ ಉತ್ಪನ್ನಕ್ಕೆ ಸಮನಾಗಿರುತ್ತದೆ.
ಜೆನೆರಿಕ್ ಮತ್ತು ಬ್ರ್ಯಾಂಡೆಡ್ ಔಷಧಗಳ ನಡುವೆ ಬೆಲೆಯ ಹೊರತಾಗಿ ಬೇರೆ ಯಾವುದೇ ವ್ಯತ್ಯಾಸವಿರುವುದಿಲ್ಲ. ಸಮೀಕರಣ, ಪ್ರಮಾಣ, ಪರಿಣಾಮ, ಅಡ್ಡ ಪರಿಣಾಮ, ಸುರಕ್ಷೆ ಸೇರಿದಂತೆ ಎಲ್ಲವೂ ಒಂದೇ ಆಗಿರುತ್ತದೆ. ಬ್ರ್ಯಾಂಡೆಡ್ ಔಷಧಗಳಿಗೆ ಬದಲಿಯಾದ ಜೆನೆರಿಕ್ ಔಷಧಗಳ ಖರೀದಿಸುವುದರಿಂದ ಸುಲಭವಾಗಿ ಶೇ.50-70ರಷ್ಟು ಹಣವನ್ನು ಉಳಿಸಬಹುದಾಗಿದೆ.
ಓದಿ: ಕಾಂಗ್ರೆಸ್ ಗೆಲ್ಲಿಸಿದ ಗ್ಯಾರಂಟಿ ಕಾರ್ಡ್.. ಹೊಸ ಸರ್ಕಾರಕ್ಕೆ ಉಚಿತ ಯೋಜನೆಗಳ ಜಾರಿಗೆ ಎದುರಾಗಲಿದೆ ಹತ್ತಾರು ಸವಾಲು