ನವದೆಹಲಿ : ದೇಶದಲ್ಲಿ ನೀರಿನ ಸಂರಕ್ಷಣೆ ಉತ್ತೇಜಿಸಲು 'ಕ್ಯಾಚ್ ದಿ ರೇನ್' ಎಂಬ ಅಭಿಯಾನ ಪ್ರಾರಂಭಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದರು.
74ನೇ ಆವೃತ್ತಿಯ 'ಮನ್ ಕಿ ಬಾತ್'ನಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಪಿಎಂ ಮೋದಿ, ನಿನ್ನೆ ಮಾಘ ಪೂರ್ಣಿಮಾ ಹಬ್ಬವಾಗಿತ್ತು. ಮಾಘ ಮಾಸವು ನದಿಗಳು, ಸರೋವರಗಳಂತಹ ಜಲಮೂಲಗಳಿಗೆ ಸಂಬಂಧಿಸಿದೆ. ಮಾರ್ಚ್ 22ರಂದು ವಿಶ್ವ ಜಲ ದಿನ ಆಚರಿಸಲಾಗುವುದು. ಬರುವ ಬೇಸಿಗೆಯ ತಿಂಗಳುಗಳಲ್ಲಿ ನೀರಿನ ಸಂರಕ್ಷಣೆಯ ಬಗ್ಗೆ ಯೋಚಿಸಲು ಇದು ಅತ್ಯುತ್ತಮ ಸಮಯ.
ನೈಸರ್ಗಿಕ ಸಂಪನ್ಮೂಲವನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ದೇಶದಲ್ಲಿ ನೀರಿನ ಸಂರಕ್ಷಣೆ ಉತ್ತೇಜಿಸಲು ಕೇಂದ್ರದ ಜಲಶಕ್ತಿ ಸಚಿವಾಲಯವು 'ಕ್ಯಾಚ್ ದಿ ರೇನ್' ಎಂಬ 100 ದಿನಗಳ ಅಭಿಯಾನ ಪ್ರಾರಂಭಿಸಲಿದೆ ಎಂದು ಮಾಹಿತಿ ನೀಡಿದರು.
ಇದೇ ವೇಳೆ ರಾಷ್ಟ್ರೀಯ ವಿಜ್ಞಾನ ದಿನದ ಬಗ್ಗೆ ಮಾತನಾಡಿದ ಪ್ರಧಾನಿ, ಈ ದಿನವನ್ನು ವಿಜ್ಞಾನಿ ಡಾ.ಸಿ.ವಿ.ರಾಮನ್ ಅವರ 'ರಾಮನ್ ಎಫೆಕ್ಟ್' ಆವಿಷ್ಕಾರಕ್ಕೆ ಸಮರ್ಪಿಸಲಾಗಿದೆ. ನಮ್ಮ ಯುವಕರು ಭಾರತೀಯ ವಿಜ್ಞಾನಿಗಳ ಬಗ್ಗೆ ಸಾಕಷ್ಟು ಓದಬೇಕು ಮತ್ತು ಭಾರತೀಯ ವಿಜ್ಞಾನದ ಇತಿಹಾಸ ತಿಳಿಯಬೇಕು ಎಂದರು.
ಶೀಘ್ರದಲ್ಲೇ ವಿದ್ಯಾರ್ಥಿಗಳು ಪರೀಕ್ಷೆಗಳನ್ನು ಬರೆಯಲಿದ್ದಾರೆ. ನೀವು ಯೋಧರಾಗಿರಬೇಕೇ ಹೊರತು ಚಿಂತಿಸುವವರಾಗಬಾರದು. ಸ್ಮಾರ್ಟ್ ಆಗಿ ಪರೀಕ್ಷೆಗೆ ತಯಾರಿ ನಡೆಸಿ, ಚೆನ್ನಾಗಿ ನಿದ್ರೆ ಮಾಡಿ, ಆಟವಾಡಿ. ಸಮಯವನ್ನು ಸರಿಯಾಗಿ ನಿರ್ವಹಿಸಿ.
ಮಾರ್ಚ್‌ನಲ್ಲಿ 'ಪರೀಕ್ಷಾ ಪೆ ಚರ್ಚಾ' ನಡೆಸಲಿರುವೆ ಎಂದ ಮೋದಿ, ಇದಕ್ಕಾಗಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ತಮ್ಮ ಸಲಹೆಗಳನ್ನು 'MyGov' ಆ್ಯಪ್ನಲ್ಲಿ ಹಂಚಿಕೊಳ್ಳಲು ಮನವಿ ಮಾಡಿದ್ದಾರೆ.