ನವದೆಹಲಿ: ದೇಶಾದ್ಯಂತ ಸೋಂಕಿತರ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹೊಸ ನಿರ್ಧಾರ ತೆಗೆದುಕೊಂಡಿದ್ದು, 45 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನ ಕೇಂದ್ರ ಸರ್ಕಾರದ ನೌಕರರು ತಾವೇ ಲಸಿಕೆ ಹಾಕಿಸಿಕೊಳ್ಳುವಂತೆ ಸೂಚಿಸಿದೆ.
ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಕೇಂದ್ರ ಸರ್ಕಾರದ ಎಲ್ಲ ಸಚಿವಾಲಯಗಳು ಮತ್ತು ಇಲಾಖೆಗಳಿಗೆ ಆದೇಶ ಹೊರಡಿಸಿದ್ದು, ಸಿಬ್ಬಂದಿ ತಾವಾಗಿಯೇ ಕೊರೊನಾ ಲಸಿಕೆ ಪಡೆಯಬೇಕು ಎಂದು ಆದೇಶ ಪ್ರತಿಯಲ್ಲಿ ಉಲ್ಲೇಖಿಸಿದೆ.
ಕೊರೊನಾ ವ್ಯಾಕ್ಸಿನ್ ಪಡೆದುಕೊಂಡ ನಂತರವೂ ಜಾಗ್ರತೆ ಇಂದಿರಬೇಕೆಂದು ಸೂಚನೆ ನೀಡಲಾಗಿದ್ದು, ಸ್ಯಾನಿಟೈಸೇಷನ್, ಮಾಸ್ಕ್ ಧರಿಸುವುದು ಸೇರಿದಂತೆ ಕೋವಿಡ್ ಮಾರ್ಗಸೂಚಿಗಳ ಪಾಲನೆ ಮಾಡಬೇಕೆಂದು ಉದ್ಯೋಗಿಗಳಿಗೆ ನಿರ್ದೇಶನ ನೀಡಿದೆ.
ಇದನ್ನೂ ಓದಿ: ಸತ್ತವನ ಬದುಕಿಸಲು ಘೋರ ಕ್ಷುದ್ರಪೂಜೆ ಮಾಡಿದ ಕುಟುಂಬಸ್ಥರು... ಮುಂದೇನಾಯ್ತು ವಿಡಿಯೋ ನೋಡಿ
ಏಪ್ರಿಲ್ 1ರಿಂದ 45 ವರ್ಷ ಹಾಗೂ ಅದಕ್ಕೂ ಮೇಲ್ಪಟ್ಟ ವಯಸ್ಸಿನ ಎಲ್ಲರಿಗೂ ಕೋವಿಡ್ ಲಸಿಕೆ ನೀಡುವುದಾಗಿ ಕೇಂದ್ರ ಸರ್ಕಾರ ಹೇಳಿತ್ತು. ಈಗ ಕೇಂದ್ರ ಸರ್ಕಾರದ ನೌಕರರು ತಾವೇ ಲಸಿಕೆ ತೆಗೆದುಕೊಳ್ಳುವಂತೆ ಹೇಳಲಾಗಿದೆ.
ಕಳೆದ ಕೆಲವು ವಾರಗಳಲ್ಲಿ ದೇಶದಲ್ಲಿ ಕೋವಿಡ್ ಪ್ರಕರಣಗಳು ತೀವ್ರವಾಗಿ ಹೆಚ್ಚಾಗುತ್ತಿವೆ. ಏಪ್ರಿಲ್ 6 ರಂದು, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪ್ರಕಾರ ಕಳೆದ 24 ಗಂಟೆಗಳಲ್ಲಿ 96,982 ಸೋಂಕಿತರು ದೇಶಾದ್ಯಂತ ಪತ್ತೆಯಾಗಿದ್ದಾರೆ.