ನವದೆಹಲಿ: ಮಹಾಮಾರಿ ಕೊರೊನಾ ವೈರಸ್ ಹಾವಳಿ ದಿನದಿಂದ ದಿನಕ್ಕೆ ಭಾರತದಲ್ಲಿ ಹೆಚ್ಚಾಗುತ್ತಿದ್ದು, ಇದರ ವಿರುದ್ಧದ ಹೋರಾಟ ಮುಂದುವರೆದಿದೆ. ಸದ್ಯ ದೇಶದಲ್ಲಿ ಉತ್ಪಾದನೆಯಾಗುತ್ತಿರುವ ಎರಡು ಲಸಿಕೆ(ಕೋವಿಶೀಲ್ಡ್, ಕೋವ್ಯಾಕ್ಸಿನ್) ಸೋಂಕಿತರಿಗೆ ನೀಡಲಾಗುತ್ತಿದೆ. ಆದರೆ, ಕೆಲವೊಂದು ರಾಜ್ಯಗಳಲ್ಲಿ ಈಗಾಗಲೇ ಲಸಿಕೆಯ ಅಭಾವ ಇದೆ ಎಂದು ಬಹಿರಂಗವಾಗಿ ಹೇಳಿಕೊಂಡಿವೆ.
ಹೀಗಾಗಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ ಎಂಬ ಮಾತು ಕೇಳಿ ಬರುತ್ತಿದೆ. ವಿದೇಶದಲ್ಲಿ ಬಳಕೆ ಮಾಡಲಾಗುತ್ತಿರುವ ಕೋವಿಡ್ ಲಸಿಕೆಗಳಿಗೆ ಭಾರತದಲ್ಲಿ ಅನುಮತಿ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ ಎಂಬ ಮಾತು ಕೇಳಿ ಬರುತ್ತಿದೆ.
ಇದನ್ನೂ ಓದಿ: ಸಿನಿಮಾದಲ್ಲಿನ ದೃಶ್ಯಕ್ಕಿಂತಲೂ ಭೀಕರ ಈ ಆಕ್ಸಿಡೆಂಟ್.. ಸಿಸಿಟಿವಿಯಲ್ಲಿ ದೃಶ್ಯ ಸೆರೆ
ರಷ್ಯಾದಲ್ಲಿ ಬಳಿಕೆಯಾಗುತ್ತಿರುವ ಸ್ಪುಟ್ನಿಕ್ ವಿ ಲಸಿಕೆ ತುರ್ತು ಬಳಕೆ ಮಾಡಲು ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಅನುಮತಿ ನೀಡಿದೆ. ಇದರ ಬೆನ್ನಲ್ಲೇ ಭಾರತದಲ್ಲಿ ಇನ್ನು ಐದು ಲಸಿಕೆಗಳಿಗೆ ಗ್ರೀನ್ ಸಿಗ್ನಲ್ ನೀಡಲಾಗುವುದು ಎಂಬ ಮಾಹಿತಿ ಹೊರಬಿದ್ದಿದೆ. ಜಾನ್ಸನ್ ಮತ್ತು ಜಾನ್ಸನ್ (ಬಯೋ ಇ), ಜೈಡಸ್ ಕ್ಯಾಡಿಲಾ, ಸೀರಮ್ ನೊವ್ಯಾಕ್ಸ್ ಮತ್ತು ಭಾರತ್ ಬಯೋಟೆಕ್‌ನಿಂದ ನೂಸಲ್ ಲಸಿಕೆಗೆ ಅನುಮತಿ ಸಿಗುವ ಸಾಧ್ಯತೆ ದಟ್ಟವಾಗಿದೆ.
ಮಹಾರಾಷ್ಟ್ರ, ಪಂಜಾಬ್ ,ದೆಹಲಿ, ರಾಜಸ್ಥಾನ ಸೇರಿದಂತೆ ಕೆಲವೊಂದು ರಾಜ್ಯಗಳಲ್ಲಿ ಕೇಂದ್ರ ಸರ್ಕಾರ ನೀಡುತ್ತಿರುವ ವ್ಯಾಕ್ಸಿನ್ ಸಾಕಾಗುತ್ತಿಲ್ಲ ಎಂಬ ಮಾತು ಕೇಳಿ ಬಂದಿದ್ದು, ಹೀಗಾಗಿ ಕೇಂದ್ರ ಸರ್ಕಾರ ಬೇರೆ ದೇಶದ ಲಸಿಕೆಗಳಿಗೆ ಅನುಮತಿ ನೀಡಿ, ವೈರಸ್ ನಿಯಂತ್ರಣಕ್ಕೆ ಕಡಿವಾಣ ಹಾಕುವ ಸಾಧ್ಯತೆ ಇದೆ. ದೇಶದಲ್ಲಿ ಈಗಾಗಲೇ 10 ಕೋಟಿಗೂ ಅಧಿಕ ಜನರಿಗೆ ಕೋವಿಡ್ ವ್ಯಾಕ್ಸಿನ್ ನೀಡಲಾಗಿದೆ.