ನವದೆಹಲಿ : ರಾಷ್ಟ್ರೀಯ ಆಯುಷ್ ಮಿಷನ್ ಅನ್ನು 2021ರ ಏಪ್ರಿಲ್ 1ರಿಂದ 2026ರ ಮಾರ್ಚ್ 31ರವರೆಗೆ ಮುಂದುವರಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಇದಕ್ಕೆ 4,607.30 ಕೋಟಿ ರೂಪಾಯಿಗಳ ಆರ್ಥಿಕ ನೆರವು ನೀಡಿದೆ. ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಸಚಿವ ಅನುರಾಗ್ ಠಾಕೂರ್, ಕೇಂದ್ರ ಸಚಿವ ಸಂಪುಟದ ನಿರ್ಧಾರಗಳನ್ನು ತಿಳಿಸಿದರು.
ನಾರ್ತ್ ಈಸ್ಟರ್ನ್ ಇನ್ಸ್‌ಟಿಟ್ಯೂಟ್ ಆಫ್ ಫೋಕ್ ಮೆಡಿಸಿನ್ (ಎನ್ಇಐಎಫ್ಎಂ)ಅನ್ನು ಈಶಾನ್ಯ ಇನ್ಸ್‌ಟಿಟ್ಯೂಟ್ ಆಫ್ ಆಯುರ್ವೇದ ಮತ್ತು ಫೋಕ್ ಮೆಡಿಸಿನ್ ರಿಸರ್ಚ್ (ಎನ್ಇಐಎಎಫ್ಎಂಆರ್) ಎಂದು ಮರು ನಾಮಕರಣ ಮಾಡಿರುವ ಆದೇಶಕ್ಕೆ ಕೇಂದ್ರ ಸರ್ಕಾರ ಅನುಮೋದಿಸಿದೆ ಎಂದು ಹೇಳಿದರು.
ಇದನ್ನೂ ಓದಿ: ಕೋವಿಡ್ 2ನೇ ಅಲೆ ಪರಿಣಾಮ: 23 ಸಾವಿರ ಕೋಟಿ ರೂ. ತುರ್ತು ಪ್ಯಾಕೇಜ್ ಘೋಷಿಸಿದ ಕೇಂದ್ರ ಸರ್ಕಾರ
ರಾಷ್ಟ್ರೀಯ ಆಯುಷ್ ಮಿಷನ್ ಮುಂದುವರಿಕೆ ಆಯುರ್ವೇದ ಮತ್ತು ಇತರ ಸಾಂಪ್ರದಾಯಿಕ ಆರೋಗ್ಯ ವ್ಯವಸ್ಥೆಗಳನ್ನು ಬಲಪಡಿಸುತ್ತದೆ. ಇದು ಸಂಶೋಧನೆಗೆ ಉತ್ತೇಜನ ನೀಡುತ್ತದೆ. ಎನ್‌ಇಐಎಎಫ್‌ಎಂಆರ್ ಅನ್ನು ಕೇವಲ ಮರುನಾಮಕರಣ ಮಾಡಿಲ್ಲ. ಅದರ ಕಾರ್ಯವನ್ನೂ ವಿಸ್ತರಿಸಲಾಗಿದೆ ಎಂದು ಸಚಿವರು ಹೇಳಿದರು.
ಗಾರ್ಮೆಂಟ್ಸ್‌ಗಳಿಗಾಗಿ ರಾಜ್ಯ ಮತ್ತು ಕೇಂದ್ರ ತೆರಿಗೆ ಮತ್ತು ಲೆವೀಸ್ (ರೋಎಸ್ಸಿಟಿಎಲ್) ಯೋಜನೆಯನ್ನು ಮಾರ್ಚ್ 31, 2024ರವರೆಗೆ ಮುಂದುವರಿಸಲು ಕ್ಯಾಬಿನೆಟ್ ಅನುಮೋದಿಸಿದೆ. ಇದರಿಂದ ಹೂಡಿಕೆ ಮತ್ತು ಉದ್ಯೋಗ ಸೃಷ್ಟಿಯಾಗಲಿದೆ. ಜೊತೆಗೆ ಸಿದ್ಧ ಉಡುಪು ತಯಾರಿಕಾ ವಲಯದಲ್ಲಿ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಯಾಗಲಿವೆ ಎಂದರು.