ನವದೆಹಲಿ: ಕಳೆದ ಮೂರು ಹಣಕಾಸು ವರ್ಷಗಳ ಅವಧಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯಿಂದ ಕೇಂದ್ರ ಸರ್ಕಾರವು ಸುಮಾರು 8.02 ಲಕ್ಷ ಕೋಟಿ ರೂಪಾಯಿಗಳನ್ನು ಗಳಿಸಿದೆ. ಅದರಲ್ಲಿ 2021ರ ಹಣಕಾಸು ವರ್ಷದಲ್ಲೇ 3.71 ಲಕ್ಷ ಕೋಟಿ ರೂಪಾಯಿ ಸಂಗ್ರಹವಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಸಂಸತ್ತಿಗೆ ಮಾಹಿತಿ ನೀಡಿದರು.
ಕಳೆದ ಮೂರು ವರ್ಷಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಹೆಚ್ಚಳ ಮತ್ತು ಈ ಇಂಧನಗಳ ಮೇಲಿನ ವಿವಿಧ ತೆರಿಗೆಗಳ ಮೂಲಕ ಗಳಿಸಿದ ಆದಾಯದ ವಿವರಗಳ ಕುರಿತಾದ ಪ್ರಶ್ನೆಗಳಿಗೆ ಸಚಿವರು ಉತ್ತರಿಸಿದರು. 2018ರ ಅಕ್ಟೋಬರ್ 5 ರಿಂದ 19.48 ರೂ. ಇದ್ದ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವು 2021ರ ನವೆಂಬರ್ 4ರ ವೇಳೆಗೆ ರೂ. 27.90ಕ್ಕೆ ಏರಿಕೆ ಕಂಡಿದೆ. ಅಲ್ಲದೆ ಇದೇ ಅವಧಿಯಲ್ಲಿ ಡೀಸೆಲ್ ಮೇಲಿನ ಸುಂಕವು ಲೀಟರ್‌ಗೆ ರೂ. 15.33 ರೂ.ಗಳಿಂದ 21.80 ಕ್ಕೆ ತಲುಪಿದೆ ಎಂದು ಸೀತಾರಾಮನ್ ರಾಜ್ಯಸಭೆಗೆ ಲಿಖಿತ ಉತ್ತರ ನೀಡಿದರು.
ಅಷ್ಟೇ ಅಲ್ಲದೆ ಈ ಅವಧಿಯಲ್ಲಿ, ಪೆಟ್ರೋಲ್ ಮೇಲಿನ ಅಬಕಾರಿಯು 2018ರ ಅಕ್ಟೋಬರ್ 5 ರಿಂದ 2019ರ ಜುಲೈ 6ರ ವೇಳೆಗೆ ಲೀಟರ್‌ಗೆ 19.48 ರೂ.ಗಳಿಂದ ರೂ. 17.98ಕ್ಕೆ ಇಳಿದಿದೆ. ಡೀಸೆಲ್ ಮೇಲಿನ ಅಬಕಾರಿ 15.33 ರೂ.ನಿಂದ 13.83 ರೂ.ಗೆ ಇಳಿಕೆಯಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕಗಳು 2021ರ ಫೆಬ್ರವರಿ 2ರವರೆಗೆ ಕ್ರಮವಾಗಿ ತಲಾ 32.98 ರೂ. ಮತ್ತು 31.83 ರೂ.ಗಳಿಗೆ ಏರಿಕೆಯಾಗುವ ಹಾದಿಯಲ್ಲಿತ್ತು. ಬಳಿಕ 2021ರ ನವೆಂಬರ್ 4ಕ್ಕೆ 27.90 ರೂ. (ಪೆಟ್ರೋಲ್) ಮತ್ತು 21.80 ರೂ.ಗಳಿಗೆ (ಡೀಸೆಲ್) ಇಳಿದಿದೆ ಎಂದರು.
'ಕಳೆದ ಮೂರು ವರ್ಷಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ನಿಂದ ಸಂಗ್ರಹಿಸಲಾದ ಸೆಸ್ ಸೇರಿದಂತೆ ಕೇಂದ್ರ ಅಬಕಾರಿ ಸುಂಕಗಳು ಮಾಹಿತಿ ನೀಡಿದ ನಿರ್ಮಲಾ ಸೀತಾರಾಮನ್, 2018-19ರಲ್ಲಿ 2,10,282 ಕೋಟಿ ರೂ, 2019-20ರಲ್ಲಿ 2,19,750 ಕೋಟಿ ಮತ್ತು 2020-21ರಲ್ಲಿ ರೂ 3,71,908 ಕೋಟಿ ಸಂಗ್ರಹವಾಗಿದೆ' ಎಂದು ಮಾಹಿತಿ ನೀಡಿದರು.
ಈ ವರ್ಷದ ದೀಪಾವಳಿಯ ಮೊದಲು ನವೆಂಬರ್ 4ರಂದು, ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕ್ರಮವಾಗಿ ಲೀಟರ್‌ಗೆ 5 ಮತ್ತು 10 ರೂ.ಗಳಷ್ಟು ಕಡಿತಗೊಳಿಸಿದೆ. ತದನಂತರ ಹಲವು ರಾಜ್ಯಗಳು ಎರಡೂ ಇಂಧನಗಳ ಮೇಲಿನ ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಕಡಿತ ಘೋಷಿಸಿದ್ದವು.
ಇದನ್ನೂ ಓದಿ: ಪರಿಷತ್ ಚುನಾವಣೆ: ನಿರೀಕ್ಷಿತ ಫಲಿತಾಂಶ ಪಡೆಯುವಲ್ಲಿ ಜೆಡಿಎಸ್ ವಿಫಲ, ದಳಪತಿಗಳು ಎಡವಿದ್ದೆಲ್ಲಿ?