ನವದೆಹಲಿ: ನಕಲಿ ನೋಂದಣಿ ವರದಿಗಳು ಬೆಳಕಿಗೆ ಬಂದಿದ್ದು, ಕೋವಿಡ್ ಲಸಿಕೆಗಾಗಿ ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರ ನೋಂದಣಿ ಅವಶ್ಯಕತೆ ಇಲ್ಲ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಕಳೆದ ಕೆಲ ದಿನಗಳಿಂದ ನಕಲಿ ನೋಂದಣಿಯಲ್ಲಿ ಶೇಕಡಾ 24ರಷ್ಟು ಏರಿಕೆ ಕಂಡುಬಂದಿದೆ.
ಕೆಲವು ಅನರ್ಹ ಫಲಾನುಭವಿಗಳನ್ನು ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರಾಗಿ ನೋಂದಾಯಿಸಲಾಗುತ್ತಿದೆ. ಜೊತೆಗೆ ನಿಗದಿತ ಮಾರ್ಗಸೂಚಿಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿ ಲಸಿಕೆ ಪಡೆಯಲಾಗುತ್ತಿದೆ ಎಂದು ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಪತ್ರದ ಮೂಲಕ ತಿಳಿಸಿದ್ದಾರೆ.
'ಕೋವಿಶೀಲ್ಡ್' ಮತ್ತು 'ಕೋವಾಕ್ಸಿನ್' ಅನುಮೋದನೆಯ ನಂತರ ಭಾರತದಲ್ಲಿ 2021 ಜನವರಿ 16ರಂದು ವ್ಯಾಕ್ಸಿನೇಷನ್ ಪ್ರಾರಂಭವಾಗಿದೆ. ಮೊದಲು ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡುವ ಉದ್ದೇಶ ಹೊಂದಲಾಯಿತು. ಮಾರ್ಚ್ 1 ರಿಂದ ಕಾಯಿಲೆಗಳಿಂದ ಬಳಲುತ್ತಿರುವ 45 ರಿಂದ 59 ವಯಸ್ಸಿನವರಿಗೆ ಲಸಿಕೆ ಪಡೆಯಲು ಅವಕಾಶ ನೀಡಲಾಯಿತು. ಏಪ್ರಿಲ್ 1ರಿಂದ 45 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಕೋವಿಡ್ -19 ಲಸಿಕೆ ಪಡೆಯಲು ಅವಕಾಶವಿದೆ. ಲಸಿಕೆ ಅಭಿಯಾನ ಆರಂಭವಾದಗಿನಿಂದ ಈವರೆಗೆ ದೇಶದಲ್ಲಿ 7.44 ಕೋಟಿ ಡೋಸ್ ಕೊರೊನಾ ಲಸಿಕೆ ನೀಡಲಾಗಿದೆ.
ಇದನ್ನೂ ಓದಿ: ಜಾಗತಿಕ ಲಿಂಗ ಸಮಾನತೆಯಲ್ಲಿ ಈ ದೇಶಗಳಿಗಿಂತಲೂ ಹಿಂದಿದೆಯೇ ಭಾರತ?