ನವದೆಹಲಿ: ಕೇಂದ್ರ ಪ್ರೌಢಶಿಕ್ಷಣ ಮಂಡಳಿಯು (ಸಿಬಿಎಸ್ಸಿ) 12 ನೇ ತರಗತಿ ಫಲಿತಾಂಶವನ್ನು ಇಂದು ಬಿಡುಗಡೆ ಮಾಡಿದೆ. ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್ cbseresults.nic.in ನಲ್ಲಿ ಪರಿಶೀಲಿಸಬಹುದು.
ಕಲೆ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳಿಗೆ ಸಂಬಂಧಿಸಿದಂತೆ ಟರ್ಮ್ 1 ಮತ್ತು ಟರ್ಮ್ 2 ಅಂಕಗಳನ್ನು ಆಧರಿಸಿ ಅಂತಿಮ ಫಲಿತಾಂಶ ಮಂಡಳಿ ಪ್ರಕಟಿಸಿದೆ. ಈ ವರ್ಷ ಒಟ್ಟು 14,44,341 ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿದ್ದರು. ಇದರಲ್ಲಿ 14,35,366 ಮಂದಿ ಪರೀಕ್ಷೆ ಬರೆದಿದ್ದು, 13,30,662 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಬಾರಿಯೂ ಸಹ ಬಾಲಕರಿಗಿಂತ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.
ಉತ್ತಮ ಸುಧಾರಣೆ: ಈ ವರ್ಷ ಶೇಕಡಾ 92.71 ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, 33,000ಕ್ಕೂ ಹೆಚ್ಚು ವಿದ್ಯಾರ್ಥಿಗಳು 95% ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ. 1.34 ಲಕ್ಷ ವಿದ್ಯಾರ್ಥಿಗಳು 90% ಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೆ. 2020ರಲ್ಲಿ ಪರೀಕ್ಷೆ ನಡೆದಾಗ 88.78% ವಿದ್ಯಾರ್ಥಿಗಳು ಪಾಸ್ ಆಗಿದ್ದರು. 2020 ಕ್ಕೆ ಹೋಲಿಸಿದರೆ ಈ ಬಾರಿ ಫಲಿತಾಂಶದಲ್ಲಿ ಗಣನೀಯ ಸುಧಾರಣೆಯಾಗಿದೆ. 2021 ರಲ್ಲಿ 99.37% ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಆದರೆ ಕೋವಿಡ್ ಹಿನ್ನೆಲೆಯಲ್ಲಿ ಬೋರ್ಡ್ ಪರೀಕ್ಷೆ ಬರೆದಿರಲಿಲ್ಲ.
ಫಲಿತಾಂಶ ಹೀಗೆ ತಿಳಿದುಕೊಳ್ಳಿ: ಫಲಿತಾಂಶ ನೋಡಲು ವಿದ್ಯಾರ್ಥಿಗಳು CBSE ಯ ಅಧಿಕೃತ ವೆಬ್‌ಸೈಟ್ cbse.nic.in ಗೆ ಭೇಟಿ ನೀಡಬೇಕಾಗುತ್ತದೆ. ಮುಖಪುಟದಲ್ಲಿ ವಿದ್ಯಾರ್ಥಿಗಳು 'Result' ಲಿಂಕ್ ಕ್ಲಿಕ್ ಮಾಡಬೇಕು. ಅಲ್ಲಿ 'CBSE Class 12th Result 2022' ಲಿಂಕ್ ಕ್ಲಿಕ್ಕಿಸಿ. ಬಳಿಕ ತಮ್ಮ ರೋಲ್ ನಂಬರ್ ಸೇರಿದಂತೆ ವಿವರಗಳನ್ನು ನಮೂದಿಸಿ ಮತ್ತು 'submit' ಆಯ್ಕೆ ಕ್ಲಿಕ್ ಮಾಡಿದರೆ ನಿಮ್ಮ ಫಲಿತಾಂಶ ಪ್ರಕಟ!.
ಉತ್ತಮ- ಕಳಪೆ ಸಾಧನೆ: ಈ ಬಾರಿಯ 12ನೇ ತರಗತಿ ಫಲಿತಾಂಶದಲ್ಲಿ ತಿರುವನಂತಪುರ ವಲಯ (98.83) ಅತ್ಯುತ್ತಮ ಸಾಧನೆ ಮಾಡಿದ್ದು, ಪ್ರಯಾಗ್‌ರಾಜ್ (83.71) ಕಳಪೆ ಸಾಧನೆ ತೋರಿದೆ. ಫಲಿತಾಂಶಕ್ಕಾಗಿ ಈ ಲಿಂಕ್ ಕ್ಲಿಕ್ ಮಾಡಿ https://cbse.digitallocker.gov.in/public/auth/login
ಇದನ್ನೂ ಓದಿ: ಪಿಯು ಫಲಿತಾಂಶ ಪ್ರಕಟ: ಗಣಿತದಲ್ಲಿ14 ಸಾವಿರ ವಿದ್ಯಾರ್ಥಿಗಳಿಂದ ಶತಕ ಸಾಧನೆ, ಈ ಬಾರಿ ಶೂನ್ಯ ಫಲಿತಾಂಶಕ್ಕೆ ಬ್ರೇಕ್