ಅಮೃತಸರ: ದೇಶ ವಿಭಜನೆಯ 75 ವರ್ಷಗಳ ನಂತರ ಪಾಕಿಸ್ತಾನದಲ್ಲಿ ಸಿಖ್ಖರಿಗೆ ಕೊನೆಗೂ ಪ್ರತ್ಯೇಕ ಗುರುತಿನ ಮಾನ್ಯತೆ ಸಿಕ್ಕಿದೆ. ಪಾಕಿಸ್ತಾನ ಸುಪ್ರೀಂ ಕೋರ್ಟ್ ಆದೇಶದಂತೆ ಪಾಕಿಸ್ತಾನದ ಅಂಕಿ - ಅಂಶಗಳ ಬ್ಯೂರೋ ಉರ್ದುವಿನಲ್ಲಿ ಪ್ರಕಟವಾದ ಜನಗಣತಿಯ ನಮೂನೆಗಳಲ್ಲಿ ಸಿಖ್ ಎಂಬ ಕಾಲಂ ಅನ್ನು ಸೇರಿಸಿದೆ.
ಈ ನಿರ್ದಿಷ್ಟ ಕಾಲಂ ಇಲ್ಲದ ಕಾರಣದಿಂದ ಇಷ್ಟು ದಿನ ಸಿಖ್ಖರನ್ನು 'ಇತರ ಧರ್ಮಗಳ' ಕಾಲಂ ಅಡಿ ಎಣಿಕೆ ಮಾಡಲಾಗುತ್ತಿತ್ತು. ಇದರಿಂದ ಪಾಕಿಸ್ತಾನದಲ್ಲಿರುವ ಸಿಖ್ ಜನಸಂಖ್ಯೆಯ ನಿಖರವಾದ ಚಿತ್ರಣ ಈವರೆಗೂ ಸಿಕ್ಕಿಲ್ಲ. ಅಪೂರ್ಣ ಮಾಹಿತಿಯ ಕಾರಣದಿಂದ ಪಾಕಿಸ್ತಾನದಲ್ಲಿ ಸಿಖ್ಖರು ಮೂಲ ಹಕ್ಕುಗಳಿಂದ ವಂಚಿತರಾಗಿದ್ದಾರೆ ಮತ್ತು ರಾಜಕೀಯ ಕ್ಷೇತ್ರದಲ್ಲಿ ತಮಗೆ ಸಿಗಬೇಕಾದ ಪ್ರಾತಿನಿಧ್ಯ ಪಡೆಯಲು ವಿಫಲರಾಗುತ್ತಿದ್ದಾರೆ.
ಪೇಶಾವರದ ಐವರು ಸಿಖ್ಖರು ಐದು ವರ್ಷಗಳ ಕಾಲ ಮಾಡಿದ ಸುದೀರ್ಘ ಹೋರಾಟದ ಫಲದಿಂದ ಕೊನೆಗೂ ಜನಗಣತಿ ಫಾರಂ ನಲ್ಲಿ ಸಿಖ್ಖರಿಗೆ ಪ್ರತ್ಯೇಕ ಕಾಲಂ ನೀಡಲಾಗಿದೆ. ಮಾರ್ಚ್ 2017 ರಲ್ಲಿ, ಖೈಬರ್ ಪಖ್ತುನಖ್ವಾ ಮೂಲದ ಸಿಖ್ ಪ್ರತಿನಿಧಿಗಳು ಪೇಶಾವರ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದೇಶ ಅವರ ಪರವಾಗಿಯೇ ಬಂದಿದ್ದರೂ ಅದರ ಅನುಷ್ಠಾನದಲ್ಲಿ ವಿಳಂಬವಾಗುತ್ತಿದೆ.
ಇದನ್ನೂ ಓದಿ: ಭಾಷಣದ ವೇಳೆ ಪಿಒಕೆಗೆ ಜನರ ಬೇಡಿಕೆ: 'ತಾಳ್ಮೆಯಿಂದಿರಿ' ಎಂದ ರಾಜನಾಥ್ ಸಿಂಗ್