ಮುಂಬೈ (ಮಹಾರಾಷ್ಟ್ರ) : ಜಗತ್ತಿನ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾದ ಮುಖೇಶ್ ಅಂಬಾನಿ ಮನೆ ಬಳಿ ಜಿಲೆಟಿನ್ ಕಡ್ಡಿಗಳನ್ನು ತುಂಬಿದ್ದ ಕಾರು ಪತ್ತೆ ಪ್ರಕರಣದಲ್ಲಿ ಬಂಧಿತರಾಗಿರುವ ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಮತ್ತು ಕಾರು ಮಾಲೀಕ ಮೃತ ಮನ್ಸುಖ್ ಹಿರೆನ್ ಭೇಟಿಯಾಗಿದ್ದು ಎನ್ನಲಾದ ಸಿಸಿಟಿವಿ ದೃಶ್ಯಾವಳಿಗಳು ಹೊರಬಿದ್ದಿವೆ.
ಈ ದೃಶ್ಯದಲ್ಲಿ ಕಾಣುವಂತೆ, ನಗರದ ಟ್ರಾಫಿಕ್ ಸಿಗ್ನಲ್ ಒಂದರಲ್ಲಿ ಕಪ್ಪು ಬಣ್ಣದ ಮರ್ಸಿಡಿಸ್ ಬೆಂಜ್ ಕಾರೊಂದು ಬಂದು ನಿಲ್ಲುತ್ತದೆ. ಅಲ್ಲಿಗೆ ಓರ್ವ ವ್ಯಕ್ತಿ ಬಂದು ಕಾರು ಹತ್ತಿಕೊಳ್ಳುತ್ತಾರೆ. ಬಳಿಕ ಕಾರು ಅಲ್ಲಿಂದ ತೆರಳುತ್ತದೆ. ಟ್ರಾಫಿಕ್ ಸಿಗ್ನಲ್ನಲ್ಲಿ ನಿಂತ ಕಾರು ಪೊಲೀಸ್ ಅಧಿಕಾರಿ ಸಚಿನ್ ವಾಜೆ ಮತ್ತು ನಡೆದುಕೊಂಡು ಬಂದು ಕಾರು ಹತ್ತಿದ ವ್ಯಕ್ತಿ ಮುನ್ಸುಖ್ ಹಿರೆನ್ ಎಂದು ಹೇಳಲಾಗ್ತಿದೆ.
ಇದನ್ನೂ ಓದಿ: ಮನ್ಸುಖ್ ಹಿರೆನ್ ಸಾವು: ಘಟನಾ ಸ್ಥಳ ಪರಿಶೀಲನೆ ನಡೆಸಿದ ಎಟಿಎಸ್
ಕಳೆದ ಫೆಬ್ರವರಿ 25 ರಂದು ಉದ್ಯಮಿ ಅನಿಲ್ ಅಂಬಾನಿಯ ಮುಂಬೈನ ಮನೆ ಆ್ಯಂಟಿಲಿಯಾ ಬಳಿ ಸ್ಫೋಟಕ ತುಂಬಿದ ವಾಹನವೊಂದು ಪತ್ತೆಯಾಗಿತ್ತು. ಈ ಪ್ರಕಣದ ತನಿಖೆ ಕೈಗೆತ್ತಿಕೊಂಡ ಎನ್ಐಎ ಮುಂಬೈ ಪೊಲೀಸ್ ಅಧಿಕಾರಿ ಮತ್ತು ಮಾಜಿ ಶಿವಸೇನೆ ಸದಸ್ಯ ಸಚಿನ್ ವಾಜೆಯನ್ನು ವಶಕ್ಕೆ ಪಡೆದಿತ್ತು. ಸ್ಫೋಟಕ ತುಂಬಿದ್ದ ವಾಹನ ದೊರೆತ ಕೆಲವೇ ದಿನಗಳಲ್ಲಿ ಕಾರಿನ ಮಾಲೀಕ ಥಾಣೆ ಮೂಲದ ಉದ್ಯಮಿ ಮನ್ಸುಖ್ ಹಿರೆನ್ ಶವವಾಗಿ ಪತ್ತೆಯಾಗಿದ್ದರು. ಈ ವಿಚಾರ ಶಿವಸೇನೆ ನೇತೃತ್ವದ ಸರ್ಕಾರವನ್ನು ಇಕ್ಕಟಿಗೆ ಸಿಲುಕಿಸಿರುವ ನಡುವೆಯೇ, ಮನ್ಸುಖ್ ಹಿರೆನ್ ಮತ್ತು ಬಂಧಿತ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಭೇಟಿಯಾಗಿದ್ದಾರೆ ಎನ್ನಲಾದ ಸಿಸಿಟಿವಿ ದೃಶ್ಯ ಇದೀಗ ಲಭ್ಯವಾಗಿದೆ. ಇದು ಪ್ರಕರಣಕ್ಕೆ ದೊಡ್ಡ ತಿರುವು ಎನ್ನಲಾಗುತ್ತಿದೆ.
ಸಾಯುವ ಮೊದಲು ಪ್ರಕರಣ ದಾಖಲಿಸಿದ್ದ ಹಿರೆನ್ :
ಸ್ಫೋಟಕವಿದ್ದ ಕಾರು ಪತ್ತೆಯಾದ ಕೆಲವೇ ದಿನಗಳಲ್ಲಿ ಉದ್ಯಮಿ ಮನ್ಸುಖ್ ಹಿರೆನ್ ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು. ಇದಕ್ಕೂ ಮೊದಲು ತನ್ನ ಕಾರು ಕಳುವಾಗಿರುವುದಾಗಿ ಅವರು ಪೊಲೀಸರಿಗೆ ದೂರು ನೀಡಿದ್ದರು. ಮುಂಬೈ ಪೊಲೀಸ್ ಅಪರಾಧ ವಿಭಾಗ ಹಿರೆನ್ ಹೇಳಿಕೆಯನ್ನು ದಾಖಲಿಸಿಕೊಂಡಿತ್ತು.
ಪೊಲೀಸರು ಕಿರುಕುಳ ನೀಡುತ್ತಿರುವುದಾಗಿ ಪತ್ರ :
ಸಾಯುವ ಮುನ್ನ ಪೊಲೀಸರು ಮತ್ತು ಮಾಧ್ಯಮದವರು ಕಿರುಕುಳ ನೀಡುತ್ತಿರುವುದಾಗಿ ಮಾರ್ಚ್ 2 ರಂದು ಮನ್ಸುಖ್ ಹಿರೆನ್ ರಾಜ್ಯ ಸರ್ಕಾರ ಮತ್ತು ಮಹಾರಾಷ್ಟ್ರದ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದ್ದರು. ಮುಖ್ಯಮಂತ್ರಿ, ಗೃಹ ಸಚಿವರು ಮತ್ತು ಪೊಲೀಸ್ ಆಯುಕ್ತರನ್ನು ಉದ್ದೇಶಿಸಿ ಬರೆದಿರುವ ಪತ್ರದಲ್ಲಿ, ಪೊಲೀಸ್ ಅಧಿಕಾರಿಗಳು ಅನಗತ್ಯ ಕಿರುಕುಳ ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದರು.
ಮನ್ಸುಖ್ ಹಿರೆನ್ ಸಾವಿನ ಪ್ರಕರಣದಲ್ಲಿ ಸಚಿನ್ ವಾಜೆ ಹೆಸರು ತಳುಕು ಹಾಕಿಕೊಂಡಿದೆ. ಸ್ಫೋಟಕವಿದ್ದ ವಾಹನವನ್ನು ಅಂಬಾನಿ ಮನೆ ಬಳಿ ಇರಿಸಿದ್ದ ಆರೋಪದ ಮೇಲೆ ಮಾರ್ಚ್ 25 ರಂದು ವಾಜೆಯನ್ನು ಎನ್ಐಎ ವಶಕ್ಕೆ ಪಡೆದಿದೆ.
ಇದನ್ನೂ ಓದಿ : ಮನ್ಸುಖ್ ಹಿರೆನ್ ಸಾವು ಪ್ರಕರಣ ಎನ್ಐಎಗೆ ಹಸ್ತಾಂತರಿಸುವಂತೆ ಕೋರ್ಟ್ ಆದೇಶ
ಎಟಿಎಸ್ನಿಂದ ಎನ್ಐಎಗೆ ಪ್ರಕರಣ ಹಸ್ತಾಂತರ:
ಹಿರೆನ್ ಸಾವಿನ ಪ್ರಕರಣವನ್ನು ಮುಂಬೈ ಎಟಿಎಸ್ ತನಿಖೆ ನಡೆಸುತ್ತಿತ್ತು. ಈ ನಡುವೆ ಪ್ರಕರಣವನ್ನು ಎನ್ಐಎ ಹಸ್ತಾಂತರಿಸುವಂತೆ ಕೇಂದ್ರ ಗೃಹ ಸಚಿವಾಲಯ ಆದೇಶಿಸಿತ್ತು. ಆದರೆ, ಎಟಿಎಸ್ ಪ್ರಕರಣ ಹಸ್ತಾಂತರಿಸುವಲ್ಲಿ ವಿಳಂಬ ಮಾಡಿತ್ತು. ಹಾಗಾಗಿ, ಎನ್ಐಎ ನ್ಯಾಯಾಲಯದ ಮೊರೆ ಹೋಗಿತ್ತು. ಎನ್ಐಎ ಅರ್ಜಿ ವಿಚಾರಣೆ ನಡೆಸಿದ ಥಾಣೆ ಸೆಷನ್ಸ್ ನ್ಯಾಯಾಲಯ, ಪ್ರಕರಣವನ್ನು ಎನ್ಐಎ ಹಸ್ತಾಂತರಿಸುವಂತೆ ಎಟಿಎಸ್ಗೆ ಸೂಚಿಸಿತ್ತು.