ನವದೆಹಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್ಇ) ಮಂಗಳವಾರ 10 ಮತ್ತು 12ನೇ ತರಗತಿಯ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಎರಡೂ ತರಗತಿಗಳ ಪರೀಕ್ಷೆಗಳು 2024ರ ಫೆಬ್ರವರಿ 15 ರಿಂದ ಪ್ರಾರಂಭವಾಗಲಿವೆ. 10ನೇ ತರಗತಿ ಪರೀಕ್ಷೆಗಳು ಮಾರ್ಚ್ 13 ರಂದು ಮತ್ತು 12 ನೇ ತರಗತಿ ಪರೀಕ್ಷೆಗಳು ಏಪ್ರಿಲ್ 2 ರಂದು ಮುಕ್ತಾಯಗೊಳ್ಳಲಿವೆ.
ಈ ಕುರಿತು ಪರೀಕ್ಷಾ ನಿರ್ವಾಹಕ ಸಂಯಮ್ ಭಾರದ್ವಾಜ್ ಪ್ರತಿಕ್ರಿಯಿಸಿ, ಒಂದು ಪರೀಕ್ಷೆಯಿಂದ ಮತ್ತೊಂದು ಪರೀಕ್ಷೆ ನಡುವೆ ಸಾಕಷ್ಟು ಅಂತರವಿದೆ. JEE ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳ ದಿನಾಂಕಗಳನ್ನು ದೃಷ್ಟಿಯಲ್ಲಿಟ್ಟುಕೊಂಡು 12ನೇ ತರಗತಿಯ ಪರೀಕ್ಷಾ ವೇಳಾಪಟ್ಟಿ ಸಿದ್ಧಪಡಿಸಲಾಗಿದೆ" ಎಂದರು.
10ನೇ ತರಗತಿ ವಿದ್ಯಾರ್ಥಿಗಳಿಗೆ ಫೆಬ್ರವರಿ 15 ರಂದು ಬೆಳಗ್ಗೆ 10.30ಕ್ಕೆ ಚಿತ್ರಕಲೆ, ರಾಯ್, ಗುರುಂಗ್, ತಮಾಂಗ್ ಮತ್ತು ಶೆರ್ಪಾ ವಿಷಯಗಳ ಪರೀಕ್ಷೆಗಳು ನಡೆಯಲಿವೆ. 10ನೇ ತರಗತಿಯ ಇತರೆ ವಿಷಯಗಳ ಪರೀಕ್ಷೆಗಳು ಫೆ.19 ಸಂಸ್ಕೃತ, ಫೆ.21 ಹಿಂದಿ, ಫೆ.26 ಇಂಗ್ಲಿಷ್, ಮಾರ್ಚ್.2 ವಿಜ್ಞಾನ, ಮಾ.7 ಸಮಾಜ ವಿಜ್ಞಾನ, ಮಾ.11 ಗಣಿತ ರಂದು ನಡೆಯಲಿವೆ.
ಸಿಬಿಎಸ್‌ಇ 12ನೇ ತರಗತಿ ಬೋರ್ಡ್ ಪರೀಕ್ಷೆಯ ವೇಳಾಪಟ್ಟಿ, ಫೆ.15 ಉದ್ಯಮಶೀಲತೆ, ಅಡುಗೆ ಪುಸ್ತಕ, ಬಂಡವಾಳ ಮಾರುಕಟ್ಟೆ, ದೈಹಿಕ ಚಟುವಟಿಕೆ ತರಬೇತುದಾರ, ಫೆ.19 ಹಿಂದಿ ಕೋರ್ ಮತ್ತು ಹಿಂದಿ ಐಚ್ಛಿಕ, ಫೆ. 22 ಇಂಗ್ಲಿಷ್, ಫೆ. 27 ರಸಾಯನಶಾಸ್ತ್ರ, ಫೆ. 29 ಭೂಗೋಳ ಶಾಸ್ತ್ರ, ಮಾರ್ಚ್. 19 ಜೀವಶಾಸ್ತ್ರ, ಏಪ್ರಿಲ್ 2 ಮಾಹಿತಿ ಅಭ್ಯಾಸ, ಕಂಪ್ಯೂಟರ್ ವಿಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಪರೀಕ್ಷೆಗಳು ನಡೆಯಲಿವೆ. ಹೆಚ್ಚಿನ ವಿವರಗಳನ್ನು ಪರಿಶೀಲಿಸಲು ಅಧಿಕೃತ ವೆಬ್‌ಸೈಟ್ cbse.gov.in ಅನ್ನು ಪರಿಶೀಲಿಸಿ
ಪ್ರಾಯೋಗಿಕ ಪರೀಕ್ಷೆ ವಿವರ: ದೇಶಾದ್ಯಂತ ಎಲ್ಲ ಸಿಬಿಎಸ್‌ಇ ಶಾಲೆಗಳು ಮತ್ತು ವಿದೇಶದಲ್ಲಿರುವ ಎಲ್ಲ ಸಿಬಿಎಸ್‌ಇ ಶಾಲೆಗಳು ಈ ಟೈಮ್ ಟೇಬಲ್ ಪ್ರಕಾರ ಪರೀಕ್ಷೆಗಳನ್ನು ನಡೆಸಬೇಕು. ಅಲ್ಲದೆ, ಸಿಬಿಎಸ್‌ಇ 12 ನೇ ತರಗತಿಯ ಪ್ರಾಯೋಗಿಕ ಪರೀಕ್ಷೆಗಳು ಜನವರಿ 1 ರಿಂದ ಪ್ರಾರಂಭವಾಗಲಿವೆ.
ಪರೀಕ್ಷಾ ದಿನಾಂಕಗಳು ಸಮೀಪಿಸುತ್ತಿದ್ದಂತೆ, ವಿದ್ಯಾರ್ಥಿಗಳು ಒತ್ತಡ ತಪ್ಪಿಸಲು ಅಧ್ಯಯನ ಮತ್ತು ವಿಶ್ರಾಂತಿಯ ನಡುವೆ ಆರೋಗ್ಯಕರ ಸಮತೋಲನ ಕಾಪಾಡಿಕೊಳ್ಳುವುದು ಅತ್ಯಗತ್ಯವಾಗಿದೆ. CBSE ಬೋರ್ಡ್ ಪರೀಕ್ಷೆಗಳು ವಿದ್ಯಾರ್ಥಿಯ ಶೈಕ್ಷಣಿಕ ಪ್ರಯಾಣದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುವುದರಿಂದ ವಿದ್ಯಾರ್ಥಿಗಳು ಈ ಬಗ್ಗೆ ಹೆಚ್ಚು ಗಮನ ಹರಿಸಬೇಕಾಗಿದೆ.
ಇದನ್ನೂ ಓದಿ: ಆರ್ಟಿಕಲ್ 370 ರದ್ದು: ಸುಪ್ರೀಂ ತೀರ್ಪಿನಿಂದ ಏಕ್ ಭಾರತ್ ಶ್ರೇಷ್ಠ್ ಭಾರತ್ ಕಲ್ಪನೆ ಸಾಕಾರ.. ಪ್ರಧಾನಿ ಮೋದಿ