ನವದೆಹಲಿ: ಭಾರತದ ವಿರುದ್ಧ ಚೀನಾ ಪರ ಪ್ರಚಾರ ಮಾಡುವಂಥ ಸುದ್ದಿಗಳನ್ನು ಪ್ರಕಟಿಸಲು ಚೀನಾದಿಂದ ಹಣ ಪಡೆದ ಗಂಭೀರ ಆರೋಪ ಹೊತ್ತಿರುವ ನ್ಯೂಸ್‌ಕ್ಲಿಕ್ ವೆಬ್ಸೈಟ್ನ ಸಂಸ್ಥಾಪಕ, ಬಂಧಿತ ಪ್ರಬೀರ್ ಪುರ್ಕಾಯಸ್ಥ ಅವರ ನಿವಾಸ ಮತ್ತು ಕಚೇರಿಯನ್ನು ಕೇಂದ್ರ ತನಿಖಾ ದಳ (ಸಿಬಿಐ) ಅಧಿಕಾರಿಗಳ ತಂಡ ಬುಧವಾರ ಜಾಲಾಡಿದೆ. ಪ್ರಮುಖ ದಾಖಲೆ ಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ವಿದೇಶಿ ದೇಣಿಗೆ (ನಿಯಂತ್ರಣ) ಕಾಯ್ದೆಯ ಉಲ್ಲಂಘನೆ ಆರೋಪದ ಮೇಲೆ ನ್ಯೂಸ್‌ಕ್ಲಿಕ್ ವಿರುದ್ಧ ಸಿಬಿಐ ಎಫ್‌ಐಆರ್ ಕೂಡ ದಾಖಲಿಸಿದೆ.
ಚೀನಾದಿಂದ ಅಕ್ರಮವಾಗಿ ಹಣ ಪಡೆದು ದೇಶದ ವಿರುದ್ಧ ಅಪಪ್ರಚಾರ ಮಾಡುವ ಕಾರ್ಯಕ್ರಮದಲ್ಲಿ ನ್ಯೂಸ್‌ಕ್ಲಿಕ್ ತೊಡಗಿಸಿಕೊಂಡಿದೆ ಎಂದು ಸಿಬಿಐ ನಡೆಸುತ್ತಿರುವ ತನಿಖೆಯಲ್ಲಿ ಆರೋಪಿಸಲಾಗಿದೆ. ಇದರ ಬಗ್ಗೆ ಜಾರಿ ನಿರ್ದೇಶನಾಲಯ (ಇಡಿ) ಕೂಡ ಪ್ರಕರಣ ದಾಖಲಿಸಿಕೊಂಡಿದೆ.
ಎಫ್‌ಐಆರ್‌ನ ಪ್ರಕಾರ, ಭಾರತದ ಸಾರ್ವಭೌಮತ್ವಕ್ಕೆ ಅಡ್ಡಿಪಡಿಸಲು ಮತ್ತು ದೇಶದ ವಿರುದ್ಧ ಪಿತೂರಿ ನಡೆಸಲು ಚೀನಾದಿಂದ ನ್ಯೂಸ್ ಪೋರ್ಟಲ್‌ಗೆ ಹೆಚ್ಚಿನ ಪ್ರಮಾಣದ ಹಣ ಹರಿದು ಬಂದಿದೆ. 2019 ರ ಲೋಕಸಭಾ ಚುನಾವಣೆಯ ವೇಳೆಯೂ ಎಲೆಕ್ಷನ್ ಪ್ರಕ್ರಿಯೆಯನ್ನು ಹಾಳುಮಾಡಲು ನ್ಯೂಸ್‌ಕ್ಲಿಕ್ ವೆಬ್ಸೈಟ್ ಸಂಸ್ಥಾಪಕ ಚೀನಾಪ್ರೇರಿತ ಪೀಪಲ್ಸ್ ಅಲೈಯನ್ಸ್ ಫಾರ್ ಡೆಮಾಕ್ರಸಿ ಅಂಡ್ ಸೆಕ್ಯುಲರಿಸಂ (ಪಿಎಡಿಎಸ್) ಗುಂಪಿನೊಂದಿಗೆ ಪಿತೂರಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಸಿಬಿಐ ಅಧಿಕಾರಿಗಳು ನ್ಯೂಸ್‌ಕ್ಲಿಕ್ ಕಚೇರಿ ಮತ್ತು ವೆಬ್ಸೈಟನ್ ಪ್ರಧಾನ ಸಂಪಾದಕ ಪ್ರಬೀರ್ ಪುರ್ಕಾಯಸ್ಥ ಅವರ ನಿವಾಸದಲ್ಲಿ ಶೋಧ ನಡೆಸಿದೆ. ಹಲವು ಪ್ರಮುಖ ದಾಖಲೆಗಳನ್ನು ವಶಕ್ಕೆ ಪಡೆದಿದೆ. "ಇದು ನಮ್ಮ ವಿರುದ್ಧ ತನಿಖೆ ನಡೆಸುತ್ತಿರುವ ಐದನೇ ಸಂಸ್ಥೆಯಾಗಿದೆ. ನಾವು ಅಧಿಕಾರಿಗಳೊಂದಿಗೆ ಸಹಕರಿಸುತ್ತಿದ್ದೇವೆ" ಎಂದು ನ್ಯೂಸ್‌ಕ್ಲಿಕ್ ಸಂಸ್ಥೆ ಎಕ್ಸ್‌ನಲ್ಲಿ ತಿಳಿಸಿದೆ.
ಪ್ರಕರಣವೇನು?: ಚೀನಾದ ಕಮ್ಯುನಿಸ್ಟ್ ಪಕ್ಷದ ಪ್ರಚಾರ ವಿಭಾಗದ ಸದಸ್ಯ ನೆವಿಲ್ಲೆ ರಾಯ್ ಸಿಂಘಮ್ ಮೂಲಕ ನ್ಯೂಸ್‌ಕ್ಲಿಕ್ ಮಾಧ್ಯಮ ವೆಬ್ಸೈಟ್ ಅಕ್ರಮವಾಗಿ ಹಣ ಪಡೆದುಕೊಂಡಿದೆ ಎಂದು ದೆಹಲಿ ಪೊಲೀಸರು ಆರೋಪಿಸಿದ್ದಾರೆ. ನ್ಯೂಸ್‌ಕ್ಲಿಕ್ ಈ ಎಲ್ಲಾ ಆರೋಪಗಳನ್ನು ನಿರಾಕರಿಸಿದೆ. ದೆಹಲಿ ಪೊಲೀಸ್ ವಿಶೇಷ ದಳವು ಅಕ್ಟೋಬರ್ 3 ರಂದು ವೆಬ್ಸೈಟ್ ಸಂಸ್ಥಾಪಕ ಪ್ರಬೀರ್ ಮತ್ತು ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಅಮಿತ್ ಚಕ್ರವರ್ತಿ ಅವರನ್ನು ಬಂಧಿಸಿದೆ. ಬಳಿಕ ದೆಹಲಿಯಲ್ಲಿರುವ ನ್ಯೂಸ್‌ಕ್ಲಿಕ್ ಕಚೇರಿಗೆ ಬೀಗ ಹಾಕಲಾಗಿದೆ.
ಇದನ್ನೂ ಓದಿ: ನ್ಯೂಸ್‌ಕ್ಲಿಕ್ ಮೇಲೆ ಪೊಲೀಸರ ದಾಳಿ ಪತ್ರಿಕಾ ಸ್ವಾತಂತ್ರ್ಯದ ಹರಣ