ಹೈದರಾಬಾದ್ (ತೆಲಂಗಾಣ): ಟಿಆರ್ಎಸ್ ನಾಯಕರಾದ ತೆಲಂಗಾಣ ಸಚಿವ ಗಂಗೂಲಾ ಕಮಲಾಕರ್ ಮತ್ತು ರಾಜ್ಯಸಭಾ ಸದಸ್ಯ ವಾವಿರಾಜು ರವಿಚಂದ್ರ ಅವರಿಗೆ ಕೇಂದ್ರೀಯ ತನಿಖಾ ದಳ (ಸಿಬಿಐ)ದ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ. ನಾಳೆ (ಗುರುವಾರ) ದೆಹಲಿಯಲ್ಲಿರುವ ಸಿಬಿಐ ಕೇಂದ್ರ ಕಚೇರಿಗೆ ಹಾಜರಾಗುವಂತೆ ಇಬ್ಬರು ನಾಯಕರಿಗೆ ಸೂಚಿಸಲಾಗಿದೆ.
ತೆಲಂಗಾಣದಲ್ಲಿ ಸಿಬಿಐ ತನಿಖೆ ಮಾಡಲು ರಾಜ್ಯ ಸರ್ಕಾರದ ಪೂರ್ವಾನುಮತಿ ಪಡೆಯುವುದು ಅಗತ್ಯವಾಗಿದೆ. ಆದರೆ, ಇತ್ತೀಚೆಗಷ್ಟೇ ಸಿಬಿಐ ಅಧಿಕಾರಿ ಎಂದು ಹೇಳಿಕೊಂಡು ಸಚಿವ ಗಂಗೂಲಾ ಕಮಲಾಕರ್ ನಿವಾಸಕ್ಕೆ ವ್ಯಕ್ತಿಯೊಬ್ಬರು ಹೋಗಿದ್ದರು. ಬಳಿಕ ಆತ ನಕಲಿ ಸಿಬಿಐ ಅಧಿಕಾರಿ ಎಂಬುದು ಬಯಲಾಗಿತ್ತು. ಇದೇ ವಿಷಯವಾಗಿ ಇಂದು ಸಿಬಿಐ ಅಧಿಕಾರಿಗಳು ಸಚಿವ ಗಂಗೂಲಾ ಕಮಲಾಕರ್ ಅವರ ನಿವಾಸಕ್ಕೆ ಭೇಟಿ ನೀಡಿದರು.
ಆದರೆ, ಮನೆಯಲ್ಲಿ ಗಂಗೂಲಾ ಅವರು ಇಲ್ಲದೇ ಇವರು ಕಾರಣ ಅಧಿಕಾರಿಗಳು ಕುಟುಂಬ ಸದಸ್ಯರೊಂದಿಗೆ ಚರ್ಚಿಸಿದರು. ಸಿಬಿಐ ಅಧಿಕಾರಿ ಎಂದು ಹೇಳಿಕೊಂಡು ಮನೆಗೆ ಬಂದಿದ್ದ ವ್ಯಕ್ತಿಯ ಯಾವೆಲ್ಲ ಮಾಹಿತಿಯನ್ನು ಪಡೆದುಕೊಂಡಿದ್ದಾನೆ ಎಂಬ ಕುರಿತು ಅಧಿಕಾರಿಗಳು ಮಾಹಿತಿ ಕಲೆ ಹಾಕಿದರು. ಬಳಿಕ ಸಚಿವ ಗಂಗೂಲಾ ಕಮಲಾಕರ್ ಹಾಗೂ ರಾಜ್ಯಸಭಾ ಸದಸ್ಯ ವಾವಿರಾಜು ರವಿಚಂದ್ರ ಅವರಿಗೆ ಸಿಬಿಐ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ.
ಗ್ರಾನೈಟ್ ಹಗರಣಕ್ಕೆ ಸಂಬಂಧಿಸಿದಂತೆ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಉಲ್ಲಂಘನೆ ಆರೋಪದ ಮೇಲೆ ಕೆಲ ದಿನಗಳ ಹಿಂದೆ ಗಂಗೂಲ ಕಮಲಾಕರ್ ಅವರ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಡೆದಿದ್ದರು. ಸಚಿವರ ನಿವಾಸ ಮತ್ತು ಕಚೇರಿಗಳಲ್ಲಿ ತಪಾಸಣೆ ನಡೆಸಲಾಗಿತ್ತು.
ಇದನ್ನೂ ಓದಿ: ಗ್ರಾನೈಟ್ ಹಗರಣ: ತೆಲಂಗಾಣ ಸಚಿವರ ಮನೆ, ಕಚೇರಿ ಸೇರಿ ಅನೇಕ ಕಡೆ ಇಡಿ - ಐಟಿ ಜಂಟಿ ದಾಳಿ