ನವದೆಹಲಿ : ರಸಗೊಬ್ಬರದ ಅಕ್ರಮ ಆರೋಪ ಸಂಬಂಧ ರಾಜಸ್ಥಾನದ ಮುಖ್ಯಮತ್ರಿ ಅಶೋಕ್ ಗೆಹ್ಲೋಟ್ ಸಹೋದರ ಅಗ್ರಸೇನ್ ಗೆಹ್ಲೋಟ್ ಮತ್ತು ಇತರ 14 ಜನರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ. ಇದೇ ಪ್ರಕರಣದಲ್ಲಿ ರಾಜಸ್ಥಾನ ಸೇರಿ ಮೂರು ರಾಜ್ಯಗಳಲ್ಲಿ ದಾಳಿ ನಡೆಸಿ, ಶೋಧ ಕಾರ್ಯ ನಡೆಸಲಾಗಿದೆ.
ಪೊಟ್ಯಾಸಿಯಮ್ ಕ್ಲೋರೈಡ್ ಎಂದು ಕರೆಯಲ್ಪಡುವ ಮ್ಯೂರಿಯೇಟ್ ಆಫ್ ಪೊಟ್ಯಾಶ್ (MOP) ಆಮದಿನಲ್ಲಿ ಭ್ರಷ್ಟಾಚಾರ ಎಸಗಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಈ ರಸಗೊಬ್ಬರವನ್ನು ರೈತರಿಗೆ ಸುಮಾರು ಶೇ.80ರಷ್ಟು ಸಬ್ಸಿಡಿಯಲ್ಲಿ ಸರ್ಕಾರ ಒದಗಿಸುತ್ತಿದೆ. ಇದರಲ್ಲಿನ ಅವ್ಯವಹಾರ ಸಂಬಂಧ ಸಿಬಿಐ ಅಗ್ರಸೇನ್ ಗೆಹ್ಲೋಟ್, ದೀನ್ ದಯಾಳ್ ವೋಹ್ರಾ, ಅಮೃತ್ ಲಾಲ್ ಬಂಡಿ, ಬ್ರಿಜೇಶ್ ಜೈರಾಮ್ ನಾಥ್, ನಿತಿನ್ ಕುಮಾರ್ ಶಾ, ಸುನಿಲ್ ಶರ್ಮಾ ಮತ್ತು ಪ್ರವೀಣ್ ಸರಾಫ್ ಸೇರಿದಂತೆ 15 ಜನರ ವಿರುದ್ಧ ಎಫ್ಐಆರ್ ದಾಖಲಿಸಿದೆ.
ಶುಕ್ರವಾರ ಸಿಎಂ ಸಹೋದರ ಅಗ್ರಸೇನ್ ಗೆಹ್ಲೋಟ್ ಅವರಿಗೆ ಸೇರಿದ ರಾಜಸ್ಥಾನದ ಮಂಡದೋರೆ, ಜೋಧಪುರ್ ನಿವಾಸಿಗಳ ಮೇಲೆ ದಾಳಿ ನಡೆಸಲಾಗಿದೆ. ಅಲ್ಲದೇ, ಗುಜರಾತ್ ಮತ್ತು ಪಶ್ಚಿಮ ಬಂಗಾಳದಲ್ಲಿ ದಾಳಿ ಮಾಡಲಾಗಿದೆ. ಒಟ್ಟಾರೆ 17 ಕಡೆಗಳಲ್ಲಿ ಏಕಕಾಲಕ್ಕೆ ಸುಮಾರು 60 ಜನ ಅಧಿಕಾರಿಗಳು ದಾಳಿ ಮಾಡಿ ದಾಖಲೆಗಳ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.
ಇತ್ತ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯ ವಿಚಾರಣೆಗೊಳಿಸಿದ ಬೆಳವಣಿಗೆಗಳ ನಂತರ ಸಿಎಂ ಅಶೋಕ್ ಗೆಹ್ಲೋಟ್ ಕಳೆದ ಕೆಲ ದಿನಗಳಿಂದ ದೆಹಲಿಯಲ್ಲೇ ಇದ್ಧಾರೆ. ಈ ಸಿಬಿಐ ದಾಳಿ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ನಾನು ಇತ್ತೀಚೆಗೆ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ನಿರ್ದೇಶಕರು ಮತ್ತು ಆದಾಯ ತೆರಿಗೆ ಇಲಾಖೆಯ ಮುಖ್ಯಸ್ಥರ ಭೇಟಿ ಸಮಯಾವಕಾಶ ಕೋರಿದ್ದೆ.
ಜೂನ್ 13ರಂದು ಈ ಕೋರಿಕೆ ಮುಂದಿಟ್ಟಿದ್ದೆ. ಇದಾದ ನಂತರ ಜೂನ್ 15ರಂದು ಕೇಸ್ ದಾಖಲಿಸಿಕೊಳ್ಳಲಾಗಿದೆ. ಜೂನ್ 17ರಂದು ದಾಳಿ ಮಾಡಲಾಗಿದೆ. ಇದು ಯಾವ ವಿಧಾನ?. ಇದು ಗ್ರಹಿಕೆಗೂ ಮೀರಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ನವಾಬ್ ಮಲ್ಲಿಕ್, ಅನಿಲ್ ದೇಶಮುಖ್ಗೆ ಮತಚಲಾವಣೆಗೆ ಅವಕಾಶ ನಿರಾಕರಿಸಿದ ಹೈಕೋರ್ಟ್