ಮುಂಬೈ: 1700 ಕೋಟಿ ರೂ. ಲೋನ್ ಹಗರಣ ಆರೋಪ ಸಂಬಂಧ ಯೆಸ್ ಬ್ಯಾಂಕ್ ಮಾಜಿ ಎಂಡಿ ಮತ್ತು ಸಿಇಓ ರಾಣಾ ಕಪೂರ್ ಮತ್ತು ಅವರ ಪತ್ನಿ ಬಿಂದು ಹಾಗೂ ಅವಂತಾ ಗ್ರೂಪ್ ಕಂಪನಿ ಪ್ರಮೋಟರ್ ಗೌತಮ್ ಥಾಪರ್ ವಿರುದ್ಧ ಸಿಬಿಐ ಶುಕ್ರವಾರ ಚಾರ್ಜ್ ಶೀಟ್ ಸಲ್ಲಿಸಿದೆ.
ಮುಂಬೈನ ವಿಶೇಷ ಸಿಬಿಐ ಕೋರ್ಟ್ ಮುಂದೆ ತನಿಖಾ ಸಂಸ್ಥೆ ಚಾರ್ಜ್ ಶೀಟ್ ಸಲ್ಲಿಸಿದೆ. ತಮ್ಮ ಅಧಿಕಾರವನ್ನು ಕಪೂರ್ ದುರುಪಯೋಗ ಬಳಸಿಕೊಂಡು ಕಡಿಮೆ ಬೆಲೆಗೆ ಅಮೃತಾ ಶೆರ್ಗಿಲ್ ಮಾರ್ಗದ 1.2 ಎಕರೆ ಬಂಗ್ಲೆ ಖರೀದಿಸಿದ್ದಾರೆ ಎಂದು ಸಿಬಿಐ ದೂರಿದೆ.
ಅವಂತಾ ಗ್ರೂಪ್ ಸಂಸ್ಥೆ 400 ಕೋಟಿ ಸಾಲಕ್ಕೆ ಈ ಬಂಗ್ಲೆಯನ್ನು ಯೆಸ್ ಬ್ಯಾಂಕ್ಗೆ ಅಡಮಾನ ಮಾಡಿತ್ತು. ಈ ಬಂಗ್ಲೆಯ ಮಾರುಕಟ್ಟೆ ದರ 550 ಕೋಟಿ ರೂ. ಆದ್ರೆ ಕಪೂರ್ ಅವರು ಇದನ್ನು 378 ಕೋಟಿ ರೂ.ಗೆ ಖರೀದಿಸಿದ್ದಾರೆ ಎಂದು ಎಫ್ಐಆರ್ನಲ್ಲಿ ಸಿಬಿಐ ತಿಳಿಸಿದೆ.
ಜೊತೆಗೆ ಕಪೂರ್ ಪತ್ನಿ ನಿರ್ದೇಶಕರಾಗಿರುವ ಬ್ಲಿಸ್ ಅಡೋಬ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆಯ ಹೆಸರಲ್ಲಿ ಅಕ್ರಮವಾಗಿ ಈ ಬಂಗ್ಲೆಯನ್ನು ಖರೀದಿಸಿದ್ದಾರೆ. ಆ ಬಳಿಕ 1360 ಕೋಟಿ ಹೆಚ್ಚುವರಿ ಸಾಲವನ್ನು ಅವಂತಾ ಗ್ರೂಪ್ನ ಇತರೆ ಸಂಸ್ಥೆಗಳಿಗೆ ಯೆಸ್ ಬ್ಯಾಂಕ್ ನೀಡಿದೆ ಎಂದು ಸಿಬಿಐ ಆರೋಪಿಸಿದೆ.