ಪುಲಿವೆಂದುಲ (ಆಂಧ್ರಪ್ರದೇಶ): ಮಾಜಿ ಸಚಿವ ವೈ.ಎಸ್. ವಿವೇಕಾನಂದ ರೆಡ್ಡಿ ಹತ್ಯೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ವೈಎಸ್‌ಆರ್‌ಸಿಪಿ ಸಂಸದ ಅವಿನಾಶ್ ರೆಡ್ಡಿ ಅವರ ತಂದೆ ವೈ ಎಸ್ ಭಾಸ್ಕರ್ ರೆಡ್ಡಿ ಅವರನ್ನು ಸಿಬಿಐ ಇಂದು ಬೆಳಗ್ಗೆ ಬಂಧಿಸಿದೆ. ಪುಲಿವೆಂದುಲದ ಭಾಸ್ಕರ್ ರೆಡ್ಡಿ ಅವರ ನಿವಾಸಕ್ಕೆ ತೆರಳಿದ ಅಧಿಕಾರಿಗಳು ಕುಟುಂಬ ಸದಸ್ಯರಿಗೆ ಮೆಮೋ ನೀಡಿ ಬಂಧಿಸಿದರು.
ಇದೇ ವೇಳೆ ಸಿಬಿಐ ಅಧಿಕಾರಿಗಳು ಭಾಸ್ಕರ್ ರೆಡ್ಡಿ ಅವರ ನಿವಾಸಕ್ಕೆ ಆಗಮಿಸಿದ್ದಾರೆ ಎಂದು ಮಾಹಿತಿ ಅರಿತ ಅವರ ಬೆಂಬಲಿಗರುಮ, ಕಾರ್ಯಕರ್ತರು ಮನೆಯ ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದರು. ಬಂಧನದ ನಂತರ ಅವರನ್ನು ಪುಲಿವೆಂದುಲದಿಂದ ಹೈದರಾಬಾದ್‌ಗೆ ಸ್ಥಳಾಂತರಿಸಲಾಯಿತು. ಅಧಿಕಾರಿಗಳು ಅವರನ್ನು ಇಂದು ಸಂಜೆಯೊಳಗೆ ಸಿಬಿಐ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿದ್ದಾರೆ. ಭಾಸ್ಕರ್ ರೆಡ್ಡಿ ಅವರನ್ನು ಬಂಧಿಸಿ ಕರೆದೊಯ್ಯುವ ವೇಳೆ ಅವರ ಬೆಂಬಲಿಗರು ಸಿಬಿಐ ಅಧಿಕಾರಿಗಳ ವಾಹನಗಳನ್ನು ತಡೆಯಲು ಯತ್ನಿಸಿದ ಘಟನೆಯೂ ನಡೆದಿದೆ.
ಕೆಲ ದಿನಗಳ ಹಿಂದೆ ವಿವೇಕಾನಂದ ರೆಡ್ಡಿ ಹತ್ಯೆ ಪ್ರಕರಣದಲ್ಲಿ ಸಂಸದ ಅವಿನಾಶ್ ರೆಡ್ಡಿ ಅವರ ಬೆಂಬಲಿಗರಾದ ಗಜ್ಜಲ ಉದಯಕುಮಾರ್ ರೆಡ್ಡಿಯನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದರು. ವಿವೇಕ ರೆಡ್ಡಿ ಹತ್ಯೆಗೂ ಮುನ್ನ ಭಾಸ್ಕರ್ ರೆಡ್ಡಿ ಅವರ ನಿವಾಸದಲ್ಲಿ ಉದಯಕುಮಾರ್ ಇದ್ದುದನ್ನು ಗೂಗಲ್ ಟೇಕ್ ಔಟ್ ಮೂಲಕ ಸಿಬಿಐ ಪತ್ತೆ ಮಾಡಿದೆ. ಈ ಹಿನ್ನೆಲೆಯಲ್ಲಿ ತನಿಖೆ ಚುರುಕುಗೊಳಿಸಿದ ಸಿಬಿಐ ಅಧಿಕಾರಿಗಳು ಭಾಸ್ಕರ್ ರೆಡ್ಡಿಯನ್ನು ಬಂಧಿಸಿದ್ದಾರೆ. ಮೊದಲಿಗೆ ಸಿಬಿಐ ಅಧಿಕಾರಿಗಳು ಹೈದರಾಬಾದ್‌ನಲ್ಲಿರುವ ಅವಿನಾಶ್ ರೆಡ್ಡಿ ಅವರ ಮನೆಗೆ ತೆರಳಿದ್ದರು ಎಂದು ವರದಿಯಾಗಿತ್ತು. ಆದರೆ ಅಲ್ಲಿಗೆ ಯಾರೂ ಬಂದಿಲ್ಲ ಎಂದು ಸಂಸದರ ಭದ್ರತಾ ಸಿಬ್ಬಂದಿ ತಿಳಿಸಿದ್ದಾರೆ.
ಬಂಧನಕ್ಕೊಳಗಾಗಿರುವ ಭಾಸ್ಕರ್ ರೆಡ್ಡಿ ಅವರು ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರ ಚಿಕ್ಕಪ್ಪ. ಏಪ್ರಿಲ್ 30ರೊಳಗೆ ತನಿಖೆ ಪೂರ್ಣಗೊಳಿಸುವಂತೆ ಸುಪ್ರೀಂ ಕೋರ್ಟ್ ಕಳೆದ ವಾರ ಸೂಚಿಸಿದ ನಂತರ ಸಿಬಿಐನ ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆಯನ್ನು ಚುರುಕುಗೊಳಿಸಿದೆ. ವೈಎಸ್ ವಿವೇಕಾನಂದ ಹತ್ಯೆ ಪ್ರಕರಣದಲ್ಲಿ ಭಾಸ್ಕರ್ ರೆಡ್ಡಿ ಮತ್ತು ಅವರ ಮಗ ಅವಿನಾಶ್ ರೆಡ್ಡಿ ಅವರನ್ನು ಈ ಹಿಂದೆ ಸಿಬಿಐ ಪ್ರಶ್ನಿಸಿತ್ತು. 2019ರ ಸಾರ್ವತ್ರಿಕ ಚುನಾವಣೆಯ ಪೂರ್ವಭಾವಿಯಾಗಿ ಪುಲಿವೆಂದುಲದಲ್ಲಿರುವ ಅವರ ನಿವಾಸದಲ್ಲಿ ಈ ವಿಚಾರಣೆ ನಡೆದಿತ್ತು.
2019ರಲ್ಲಿ ಕಡಪ ಲೋಕಸಭಾ ಕ್ಷೇತ್ರಕ್ಕೆ ಮಗ ಅವಿನಾಶ್ ರೆಡ್ಡಿಯ ವಿರುದ್ಧ ವಿವೇಕಾನಂದ ರೆಡ್ಡಿ ಅಭ್ಯರ್ಥಿಯಾಗಿದ್ದನ್ನು ಭಾಸ್ಕರ್ರೆಡ್ಡಿ ವಿರೋಧಿಸಿದ್ದರು. ಇದರಿಂದಾಗಿ ಇಬ್ಬರ ಮಧ್ಯೆ ವೈಮನಸ್ಸು ಬೆಳೆದಿತ್ತು. ಚುನಾವಣೆಯಲ್ಲಿ ವಿವೇಕಾನಂದ ರೆಡ್ಡಿ ಸೋಲು ಅನುಭವಿಸಿದ ಬಳಿಕ ಕುಪಿತಗೊಂಡಿದ್ದು. ಭಾಸ್ಕರ್ರೆಡ್ಡಿ, ಅವಿನಾಶ್ ರೆಡ್ಡಿ ಅವರ ಮನೆಗೆ ಹೋದ ವಿವೇಕಾನಂದ ರೆಡ್ಡಿ ಇಬ್ಬರಿಗೆ ಬೆದರಿಕೆ ಹಾಕಿದ್ದ ಎಂದು ವರದಿಯಾಗಿತ್ತು. ಇದಾದ ಬಳಿಕ ಪಕ್ಷದಲ್ಲಿ ವಿವೇಕಾನಂದ ರೆಡ್ಡಿ ಇರುವವರೆಗೂ ತಾವು ಬೆಳೆಯಲಾಗಲ್ಲ ಎಂಬುದು ಭಾಸ್ಕರ್ರೆಡ್ಡಿ ಅವರ ಅಸಮಾಧಾನಕ್ಕೆ ಕಾರಣವಾಗಿತ್ತು.
ಇದರಿಂದ ಸ್ಕೆಚ್ ಹಾಕಿ ದೇವಿರೆಡ್ಡಿ ಮತ್ತು ಶಿವಶಂಕರ್ ರೆಡ್ಡಿ ಅವರಿಂದ ವಿವೇಕಾನಂದ ರೆಡ್ಡಿಯನ್ನು ಹತ್ಯೆ ಮಾಡಿಸಲಾಗಿದೆ ಎಂದು ಸಿಬಿಐ ಶಂಕಿಸಿದೆ. ಇದರ ಭಾಗವಾಗಿ ಈಗ ಭಾಸ್ಕರ್ರೆಡ್ಡಿ ಅವರನ್ನು ಬಂಧಿಸಲಾಗಿದೆ.
ಓದಿ: ಬಿಜೆಪಿ ಶಾಸಕ ಅವಿನಾಶ್ ಜಾಧವ್, ಬೆಂಬಲಿಗರ ಕಾರಿನ ಮೇಲೆ ಕಲ್ಲು ತೂರಾಟ