ಚಂಡೀಗಢ: ಹರಿಯಾಣದಲ್ಲಿ 2019ರಿಂದ 2021ರವರೆಗೆ 2,943 ರೈತರ ಮೇಲೆ ಕೃಷಿ ತ್ಯಾಜ್ಯ ಸುಟ್ಟ ಆರೋಪದ ದೂರುಗಳನ್ನು ದಾಖಲಿಸಿಕೊಳ್ಳಲಾಗಿದೆ. 2019 ಮತ್ತು 2020ರಲ್ಲಿ ಸುಮಾರು 736 ಬಂಧಿಸಲಾಗಿತ್ತು ಎಂದು ಹರಿಯಾಣ ಸರ್ಕಾರ ತಿಳಿಸಿದೆ.
ಹರಿಯಾಣ ರಾಜ್ಯ ವಿಧಾನಸಭೆಯಲ್ಲಿ ಐಎನ್‌ಎಲ್‌ಡಿ ಸದಸ್ಯ ಅಭಯ್ ಸಿಂಗ್ ಚೌಟಾಲಾ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಕೃಷಿ ಸಚಿವ ಜೆ ಪಿ ದಲಾಲ್ ಲಿಖಿತ ಉತ್ತರವನ್ನು ನೀಡಿದ್ದಾರೆ. ರಾಜ್ಯದಲ್ಲಿ ಕಳೆದ ಮೂರು ವರ್ಷದಲ್ಲಿ ಎಷ್ಟು ರೈತರ ಮೇಲೆ ಜಿಲ್ಲಾವಾರು ಪ್ರಕರಣಗಳು, ಕೃಷಿ ತ್ಯಾಜ್ಯ ಸುಟ್ಟ ಆರೋಪದಲ್ಲಿ ದೂರು ದಾಖಲಾಗಿವೆ ಎಂದು ಅಭಯ್ ಸಿಂಗ್ ಚೌಟಾಲಾ ಪ್ರಶ್ನೆ ಕೇಳಿದ್ದರು.
2019ರಲ್ಲಿ ಕೃಷಿ ತ್ಯಾಜ್ಯ ಸುಟ್ಟ ರೈತರಿಗೆ 37 ಲಕ್ಷ ರೂಪಾಯಿ, 2020ರಲ್ಲಿ ಒಂದು ಕೋಟಿ ರೂಪಾಯಿ ಹಾಗೂ 2021ರಲ್ಲಿ 82 ಲಕ್ಷ ರೂಪಾಯಿಗೂ ಅಧಿಕ ದಂಡ ವಿಧಿಸಲಾಗಿದೆ ಎಂದು ಕೃಷಿ ಸಚಿವ ಜೆ ಪಿ ದಲಾಲ್ ಮಾಹಿತಿ ನೀಡಿದ್ದಾರೆ.
ಅಂದಹಾಗೆ, 2019ರಲ್ಲಿ ಜಿಂದ್ನಲ್ಲಿ 515, ಕರ್ನಾಲ್ನಲ್ಲಿ 438 ಮತ್ತು ಫತೇಹಾಬಾದ್ನಲ್ಲಿ 431 ಪ್ರಕರಣಗಳನ್ನು ದಾಖಲು ಮಾಡಿಕೊಳ್ಳಲಾಗಿದೆ. 2020ರಲ್ಲಿ ಜಿಂದ್ನಲ್ಲಿ 439 ಪ್ರಕರಣಗಳನ್ನು ದಾಖಲು ಮಾಡಲಾಗಿದ್ದು, ಇದೇ ಅತ್ಯಂತ ಹೆಚ್ಚಿನ ಪ್ರಕರಣಗಳನ್ನು ದಾಖಲಿಸಿಕೊಂಡ ಜಿಲ್ಲೆಯಾಗಿದೆ. ಈ ವರ್ಷ ಯಾವುದೇ ರೈತರನ್ನು ಬಂಧಿಸಲಾಗಿಲ್ಲ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಈ 'ರಾವಣ'ನಿಗೆ ಭಾರಿ ಡಿಮ್ಯಾಂಡ್.. ಐದು ಕೋಟಿ ರೂಪಾಯಿಗೂ ಮಾರಲು ಒಪ್ಪದ ಮಾಲೀಕ!