ಲೂಧಿಯಾನ (ಪಂಜಾಬ್): ಕ್ಯಾಂಟರ್‌ನಿಂದ ಕಾರ್ಬನ್ ಡೈಆಕ್ಸೈಡ್ ಅನಿಲ ಸೋರಿಕೆಯಾದ ಕಾರಣ ಕನಿಷ್ಠ ಐವರು ಕಾರ್ಮಿಕರು ಪ್ರಜ್ಞೆ ತಪ್ಪಿ ಬಿದ್ದು, ಆಸ್ಪತ್ರೆ ಸೇರಿರುವ ಘಟನೆ ಪಂಜಾಬ್ನ ಲೂಧಿಯಾನದಲ್ಲಿ ನಡೆದಿದೆ. ಅದೃಷ್ಟವಶಾತ್ ಕೂಡಲೇ ಇತರ ಕಾರ್ಮಿಕರು ವಾಲ್ವ್ ಮುಚ್ಚಿ ಹಾಗೂ ಆಮ್ಲಜನಕ ಬಿಡುಗಡೆ ಮಾಡಿದ್ದರಿಂದ ಭಾರಿ ಅನಾಹುತ ತಪ್ಪಿದೆ.
ಇಲ್ಲಿನ ಗಿಯಾಸ್‌ಪುರ ಪ್ರದೇಶದಲ್ಲಿ ಮಂಗಳವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ವೆಲ್ಟೆಕ್ ಇಕ್ವಿಪ್‌ಮೆಂಟ್ ಮತ್ತು ಇನ್‌ಫ್ರಾಸ್ಟ್ರಕ್ಚರ್ ಕಂಪನಿಗೆ ದ್ರವ ಇಂಗಾಲದ ಡೈಆಕ್ಸೈಡ್ಅನ್ನು ವರ್ಗಾಯಿಸುವಾಗ ಅದು ಸೋರಿಕೆಯಾಗಿದೆ. ಇದರಿಂದ ಐವರು ಕಾರ್ಮಿಕರು ಉಸಿರಾಟದ ಸಮಸ್ಯೆ ಎದುರಿಸಿ ಪ್ರಜ್ಞೆ ತಪ್ಪಿದ್ದಾರೆ. ಆಗ ತಕ್ಷಣವೇ ಅವರನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ದಾಖಲಿಸಲಾಗಿದೆ.
ಈ ಘಟನೆಯ ವಿಷಯ ತಿಳಿಸಿದ ಲುಧಿಯಾನದ ಹೆಚ್ಚುವರಿ ಡೆಪ್ಯುಟಿ ಕಮಿಷನರ್ (ಎಡಿಸಿ) ರಾಹುಲ್ ಚಾಬಾ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೇ ವೇಳೆ ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕ್ಯಾಂಟರ್‌ನ ಸುರಕ್ಷತಾ ಕವಾಟಕ್ಕೆ ಹಾನಿಯಾಗಿ ಗ್ಯಾಸ್ ಸೋರಿಕೆಯಾದ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: ಮಹಾರಾಷ್ಟ್ರದ ಸ್ಟೀಲ್ ಕಾರ್ಖಾನೆಯಲ್ಲಿ ಸ್ಫೋಟ: ಇಬ್ಬರು ಕಾರ್ಮಿಕರ ದುರ್ಮರಣ