ಹರಿದ್ವಾರ (ಉತ್ತರಾಖಂಡ): ಶುಕ್ರವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಬಹದರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಸ್ತೆ ಅಪಘಾತ ಸಂಭವಿಸಿದೆ. ದೆಹಲಿಯಿಂದ ಬರುತ್ತಿದ್ದ ಕಾರೊಂದು ಮೇಲ್ಸೇತುವೆ ತಡೆಗೋಡೆಯನ್ನು ದಾಟಿ ಬತ್ತಿದ ನದಿಗೆ ಬಿದ್ದಿದೆ. ಅಷ್ಟೂ ಎತ್ತರದಿಂದ ಬಿದ್ದರೂ ಕಾರಿನಲ್ಲಿದ್ದ ದಂಪತಿಗೆ ಯಾವುದೇ ತೊಂದರೆ ಆಗಿಲ್ಲ. ಪೊಲೀಸರು ತಕ್ಷಣ ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ.
ಈ ವೇಳೆ ಫ್ಲೈಓವರ್ ಮೇಲೆ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಕಾರು ಮೇಲ್ಸೇತುವೆಯಿಂದ ಸುಮಾರು 30 ಅಡಿ ಕೆಳಗೆ ಬಿದ್ದಿದೆ. ಹೀಗಿದ್ದರೂ ಕಾರಿನಲ್ಲಿದ್ದ ದಂಪತಿ ಸುರಕ್ಷಿತವಾಗಿದ್ದಾರೆ.
ಮಾಹಿತಿ ಪ್ರಕಾರ ದಂಪತಿ, ಕಾರಿನಲ್ಲಿ ನೋಯ್ಡಾದಿಂದ ಹರಿದ್ವಾರಕ್ಕೆ ಬರುತ್ತಿದ್ದರು. ಅವರ ಕಾರು ಪತಂಜಲಿ ಯೋಗಪೀಠದ ಮುಂಭಾಗದ ಮೇಲ್ಸೇತುವೆಯನ್ನು ತಲುಪಿದಾಗ ಹಿಂದಿನಿಂದ ವೇಗವಾಗಿ ಬಂದ ಬಸ್ ಕಾರಿಗೆ ಜೋರಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಚಾಲಕನಿಗೆ ಕಾರನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಇದರಿಂದ ಕಾರು ಸೇತುವೆಯ ತಡೆಗೋಡೆ ಮುರಿದು ಕೆಳಗಿನ ನದಿಗೆ ಬಿದ್ದಿದೆ.
ಈ ನದಿಯು ಮಳೆಗಾಲದಲ್ಲಿ ನೀರಿನಿಂದ ತುಂಬಿರುತ್ತದೆ. ಇತ್ತೀಚಿನ ದಿನಗಳಲ್ಲಿ ಮಳೆ ಕೊರತೆಯಿಂದ ನದಿ ಬತ್ತಿ ಹೋಗಿದೆ. ಅಷ್ಟೊಂದು ಎತ್ತರದಿಂದ ಬಿದ್ದಿದ್ದರಿಂದ ಕಾರು ಪಲ್ಟಿಯಾಗಿದೆ. ಆದರೆ, ಪತಿ-ಪತ್ನಿ ಸೀಟ್ ಬೆಲ್ಟ್ ಹಾಕಿಕೊಂಡಿದ್ದರಿಂದ ಇಬ್ಬರಿಗೂ ಗಾಯವಾಗಿಲ್ಲ. ಪೊಲೀಸರು ಇಬ್ಬರನ್ನೂ ಸುರಕ್ಷಿತವಾಗಿ ಕಾರಿನಿಂದ ಹೊರತಂದಿದ್ದಾರೆ.
ಇದನ್ನೂ ಓದಿ: ಕಂದಕಕ್ಕೆ ಉರುಳಿಬಿದ್ದ ಟಾಟಾ ಸುಮೋ: ಮಹಿಳೆಯರು ಸೇರಿ 8 ಜನ ಸಾವು
ಮಾಹಿತಿ ಪ್ರಕಾರ, ನವೀನ್ ರಸ್ತೋಗಿ ಮತ್ತು ಅವರ ಪತ್ನಿ ಅಂಜು ರಸ್ತೋಗಿ ಆಲ್ಫಾ ಒನ್ ಗ್ರೇಟರ್ ನೋಯ್ಡಾದಿಂದ ಹರಿದ್ವಾರಕ್ಕೆ ಬರುತ್ತಿದ್ದರು. ಆಗ ಪತಂಜಲಿ ಮೇಲ್ಸೇತುವೆಯಲ್ಲಿ ಹಿಂಬದಿಯಿಂದ ಅವರ ಕಾರಿಗೆ ಬಸ್ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಅವರ ಕಾರು ಭತ್ತಿದ ನದಿಗೆ ಬಿದ್ದಿದೆ. ಆದರೆ ಇಬ್ಬರಿಗೂ ಯಾವುದೇ ರೀತಿಯ ಗಾಯಗಳಾಗಿಲ್ಲ.