ನವದೆಹಲಿ: ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಟೀಂ ಇಂಡಿಯಾ ಆಟಗಾರ ರಿಷಭ್ ಪಂತ್ ಅವರ ಆರೋಗ್ಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ವಿಚಾರಿಸಿದ್ದಾರೆ. ಪಂತ್ ಅವರ ತಾಯಿಯೊಂದಿಗೆ ಪ್ರಧಾನಿ ಮಾತನಾಡಿ ಆರೋಗ್ಯದ ಕುರಿತು ಮಾಹಿತಿ ಪಡೆದಿದ್ದಾರೆ.
ಇಂದು ಬೆಳಗ್ಗೆ ಉತ್ತರಾಖಂಡನ ರೂರ್ಕಿ ಗಡಿ ಬಳಿ ದೆಹಲಿ ಮತ್ತು ಡೆಹ್ರಾಡೂನ್ ಹೆದ್ದಾರಿಯಲ್ಲಿ ನಡೆದ ಕಾರು ಅಪಘಾತದಲ್ಲಿ ಕ್ರಿಕೆಟಿಗ ರಿಷಭ್ ಪಂತ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಪ್ರಧಾನಿ ಟ್ವೀಟ್ ಮಾಡಿ, ಖ್ಯಾತ ಕ್ರಿಕೆಟಿಗ ರಿಷಭ್ ಪಂತ್ ಅವರ ಅಪಘಾತದಿಂದ ನೊಂದಿದ್ದೇನೆ. ಅವರ ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ನಾನು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದರು. ಇದೀಗ ಪಂತ್ ತಾಯಿ ಅವರೊಂದಿಗೆ ಪ್ರಧಾನಿ ಮಾತನಾಡಿ ಆರೋಗ್ಯ ವಿಚಾರಿಸಿದ್ದಾರೆ.
ಪಂತ್ ಆರೋಗ್ಯದ ಬಗ್ಗೆ ಬಿಸಿಸಿಐ ಹೇಳಿಕೆ: ಪ್ರತಿಭಾವಂತ ಕ್ರಿಕೆಟಿಗ ರಿಷಭ್ ಪಂತ್ ಬೇಗ ಚೇತರಿಕೆಯಾಗಿ ಕ್ರಿಕೆಟ್ ಜಗತ್ತಿನ ಪ್ರಮುಖರು ಹಾರೈಸಿದ್ದಾರೆ. ಅಲ್ಲದೇ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸಹ ಪಂತ್ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿದೆ. ಪಂತ್ ಅವರಿಗೆ ಸಾಧ್ಯವಾದಷ್ಟು ಉತ್ತಮ ವೈದ್ಯಕೀಯ ಆರೈಕೆ ಮತ್ತು ಈ ಆಘಾತಕಾರಿ ಸಮಯದಿಂದ ಹೊರಬರಲು ಅಗತ್ಯವಿರುವ ಎಲ್ಲ ಸಹಕಾರವನ್ನು ಅವರಿಗೆ ಮಂಡಳಿ ನೀಡಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ತಿಳಿಸಿದ್ದಾರೆ.
ಇದನ್ನೂ ಓದಿ: ಕಾರಿನ ಕಿಟಕಿ ಒಡೆದು ಜೀವ ಉಳಿಸಿಕೊಂಡ ಪಂತ್: ಹೊತ್ತಿ ಉರಿದ ಬಿಎಂಡಬ್ಲ್ಯು ಕಾರು
ಪ್ರಸ್ತುತ ರಿಷಭ್ ಪಂತ್ಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರೊಂದಿಗೆ ವೈದ್ಯಕೀಯ ತಂಡ ನಿಕಟ ಸಂಪರ್ಕದಲ್ಲಿದ್ದು, ಅವರ ಕುಟುಂಬದೊಂದಿಗೂ ಸಹ ಬಿಸಿಸಿಐ ನಿರಂತರ ಸಂಪರ್ಕದಲ್ಲಿದೆ ಎಂದು ಜಯ್ ಶಾ ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದರೊಂದಿಗೆ ಟ್ವೀಟ್ ಮಾಡಿದ್ದು, ನನ್ನ ಪ್ರಾರ್ಥನೆಯು ಪಂತ್ ಜೊತೆಯಲ್ಲಿದೆ. ಅವರು ಚೇತರಿಕೆಯ ಹಾದಿಯಲ್ಲಿ ಹೋರಾಡುತ್ತಿದ್ದಾರೆ. ನಾವು ಅವರಿಗೆ ಅಗತ್ಯವಿರುವ ಎಲ್ಲ ನೆರವು ನೀಡುತ್ತೇವೆ ಎಂದು ಹೇಳಿದ್ದಾರೆ.
ಅಪಘಾತದಲ್ಲಿ ಪಂತ್ಗೆ ಆಗಿರುವುದೇನು?: ರಸ್ತೆ ಅಪಘಾತದಲ್ಲಿ ರಿಷಭ್ ಪಂತ್ಗೆ ಆಗಿರುವ ಗಾಯಗಳ ಬಗ್ಗೆಯೂ ಬಿಸಿಸಿಐ ಮಾಹಿತಿ ನೀಡಿದೆ. ಪಂತ್ ಅವರ ಹಣೆಯ ಮೇಲೆ ಎರಡು ಗಾಯಗಳಾಗಿವೆ. ಜೊತೆಗೆ ಬಲ ಮೊಣಕಾಲಿಗೆ ಪೆಟ್ಟು ಬಿದ್ದಿದೆ (ligament tear in his right knee). ಬಲಗೈನ ಮಣಿಕಟ್ಟು, ಪಾದ, ಕಾಲಿನ ಬೆರಳು ಹಾಗು ಬೆನ್ನಿನ ಮೇಲೆ ಸವೆತದ ಗಾಯಗಳಾಗಿವೆ ಎಂದು ಬಿಸಿಸಿಐ ಮಾಹಿತಿ ಹಂಚಿಕೊಂಡಿದೆ.
ರಾಜ್ಯ ಸರ್ಕಾರದಿಂದ ವೈದ್ಯಕೀಯ ವೆಚ್ಚ: ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ಪಂತ್ ಆರೋಗ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಇದರೊಂದಿಗೆ ಪಂತ್ ಅವರ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ತಮ್ಮ ಸರ್ಕಾರ ಭರಿಸಲಿದೆ ಎಂದು ಹೇಳಿದ್ದಾರೆ. ರಿಷಭ್ ತಾಯಿಯೊಂದಿಗೆ ಮಾತನಾಡಿರುವ ಅವರು, ರಾಜ್ಯ ಸರ್ಕಾರವು ಅಗತ್ಯವಿರುವ ಎಲ್ಲ ಸಹಕಾರವನ್ನು ನೀಡುತ್ತದೆ ಎಂದು ಭರವಸೆ ನೀಡಿದ್ದಾರೆ. ಜೊತೆಗೆ ಪಂತ್ ಚಿಕಿತ್ಸೆಗೆ ಎಲ್ಲ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೂ ಸೂಚಿಸಿರುವ ಸಿಎಂ ಧಾಮಿ, ಅಗತ್ಯವಿದ್ದರೆ ಏರ್ ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗುವುದು ಎಂದೂ ತಿಳಿಸಿದ್ದಾರೆ.
ಕ್ರಿಕೆಟ್ನ ಪ್ರಮುಖರ ಹಾರೈಕೆ: ಖ್ಯಾತ ನಾಮರಾದ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ವಿವಿಎಸ್ ಲಕ್ಷ್ಮಣ್ ಸೇರಿದಂತೆ ಕ್ರಿಕೆಟ್ ಲೋಕದ ದಿಗ್ಗಜರು ಪಂತ್ ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸಿ ಟ್ವೀಟ್ ಮಾಡಿದ್ದಾರೆ. ರಿಷಭ್ ಪಂತ್ ನೀವು ಬಹಳ ಬೇಗ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. ನನ್ನ ಪ್ರಾರ್ಥನೆಗಳು ನಿಮ್ಮೊಂದಿಗಿವೆ ಎಂದು ಸಚಿನ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ರಿಷಭ್ ಪಂತ್ ಕಾರು ಅಪಘಾತ: ನಟಿ ಊರ್ವಶಿ ರೌಟೇಲಾ ಪೋಸ್ಟ್ ಏನಿತ್ತು?
ರಿಷಭ್ ಪಂತ್ ಅವರಿಗಾಗಿ ನಾನು ಪ್ರಾರ್ಥಿಸುತ್ತಿದ್ದೇನೆ. ಅದೃಷ್ಟವಶಾತ್ ಅವರು ಅಪಾಯದಿಂದ ಪಾರಾಗಿದ್ದಾರೆ. ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. ಚಾಂಪ್ ಬೇಗ ಗುಣಮುಖರಾಗಿ ಎಂದು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥರಾದ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಹೇಳಿದ್ದಾರೆ. ಪ್ರೀತಿಯ ಪಂತ್ ಶೀಘ್ರವಾಗಿ ಚೇತರಿಸಿಕೊಳ್ಳಲಿ. 'ಬಹುತ್ ಹೀ ಜಲ್ದ್ ಸ್ವಸ್ಥ್ ಹೋ ಜಾವೋ' (ಬೇಗ ಗುಣಮುಖರಾಗಿ) ಎಂದು ವೀರೇಂದ್ರ ಸೆಹ್ವಾಗ್ ಟ್ವೀಟ್ ಮಾಡಿ ಹಾರೈಸಿದ್ದಾರೆ.
ಐಪಿಎಲ್ ಫ್ರಾಂಚೈಸ್ ಆಗಿರುವ ಡೆಲ್ಲಿ ಕ್ಯಾಪಿಟಲ್ಸ್ ಕೂಡ ತಮ್ಮ ತಂಡದ ನಾಯಕ ಪಂತ್ ಅವರಿಗಾಗಿ ಪ್ರಾರ್ಥಿಸಿದೆ. ತಂಡದ ಮುಖ್ಯ ಕೋಚ್ ರಿಕಿ ಪಾಂಟಿಂಗ್ ಸಹ ರಿಷಭ್ ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ಹಾರೈಸಿದ್ದಾರೆ. ಅನಿಲ್ ಕುಂಬ್ಳೆ, ಶಿಖರ್ ಧವನ್, ಸುರೇಶ್ ರೈನಾ, ಭಾರತದ ಮಾಜಿ ಆಟಗಾರ್ತಿ ಜೂಲನ್ ಗೋಸ್ವಾಮಿ ಮತ್ತು ಪಾಕಿಸ್ತಾನದ ಶಾಹೀನ್ ಶಾ ಆಫ್ರಿದಿ ಕೂಡ ಪಂತ್ ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ಹಾರೈಸಿದ್ದಾರೆ.
ಇದನ್ನೂ ಓದಿ: ಕ್ರಿಕೆಟಿಗ ರಿಷಭ್ ಪಂತ್ ಕಾರು ಅಪಘಾತ : ವಾಹನ ಸಂಪೂರ್ಣ ಭಸ್ಮ.. ಡೆಹ್ರಾಡೂನ್ ಆಸ್ಪತ್ರೆಗೆ ಶಿಫ್ಟ್