ಮುಂಬೈ (ಮಹಾರಾಷ್ಟ್ರ): ಪ್ರಸ್ತುತ ಮಹಾರಾಷ್ಟ್ರದ ರಾಜ್ಯಪಾಲರಾಗಿರುವ ಭಗತ್ ಸಿಂಗ್ ಕೋಶ್ಯಾರಿ ಅವರು ರಾಜ್ಯಪಾಲರ ಸ್ಥಾನದಿಂದ ಕೆಳಗಿಳಿಯಲು ನಿರ್ಧರಿಸಿದ ಬೆನ್ನಲ್ಲೇ, ಅವರ ನಂತರ ರಾಜ್ಯವನ್ನು ಯಾರು ಮುನ್ನಡೆಸುತ್ತಾರೆ ಎಂಬ ಪ್ರಶ್ನೆ ಜನರ ನಿದ್ದೆಗೆಡಿಸಿತ್ತು. ಆದರೆ, ಇದೀಗ ಈ ಕುತೂಹಲಕ್ಕೆ ಉತ್ತರವೊಂದು ಸಿಕ್ಕಿದ್ದು, ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಮಹಾರಾಷ್ಟ್ರದ ಮುಂದಿನ ರಾಜ್ಯಪಾಲರಾಗುವ ಸಾಧ್ಯತೆಯಿದೆ ಎಂಬ ಮಾಹಿತಿಯನ್ನು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ.
ಈ ಹಿಂದೆ ಬಿಜೆಪಿಯ ಸುಮಿತ್ರಾ ಮಹಾಜನ್ ಮುಂದಿನ ರಾಜ್ಯಪಾಲರಾಗಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಸ್ವಲ್ಪದರಲ್ಲೇ ಅವರ ಹೆಸರನ್ನು ಗವರ್ನರ್ ರೇಸ್‌ನಿಂದ ಬಿಜೆಪಿ ಹಿಂತೆಗೆದುಕೊಡಿದೆ. ಅಸೆಂಬ್ಲಿ ಚುನಾವಣೆಗೆ ಮುಂಚೆಯೇ ಅಮರಿಂದರ್ ಸಿಂಗ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವುದಕ್ಕೆ ಬಿಜೆಪಿ ಕೊಡುತ್ತಿರುವ ಉಡುಗೊರೆಯೂ ಆಗಿರಬಹುದು ಎಂದು ಮೂಲಗಳು ಹೇಳುತ್ತಿವೆ.
ಜನವರಿ 23 ರಂದು ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರು, ಇತ್ತೀಚೆಗೆ ಮುಂಬೈಗೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜಕೀಯ ಜವಾಬ್ದಾರಿಯಿಂದ ಕೆಳಗಿಳಿಯುವ ಬಯಕೆಯನ್ನು ತಿಳಿಸಿದ್ದೇನೆ ಎಂದು ಹೇಳಿದ್ದರು. ರಾಜ್ಯಪಾಲ ಕೊಶ್ಯಾರಿ ಅವರು ಸೋಮವಾರ ರಾಜಭವನದಿಂದ ಕಚೇರಿ ಹೊರಡಿಸಿದ್ದ ಹೇಳಿಕೆಯಲ್ಲಿ, ತಮ್ಮ ಉಳಿದ ಜೀವನವನ್ನು ಓದುವುದು, ಬರವಣಿಗೆ ಮತ್ತು ಇತರ ವಿರಾಮ ಚಟುವಟಿಕೆಗಳಲ್ಲಿ ಕಳೆಯುವ ಬಯಕೆಯನ್ನು ವ್ಯಕ್ತಪಡಿಸಿದ್ದರು. ಸಂತರು, ಸಮಾಜ ಸುಧಾರಕರು ಮತ್ತು ವೀರ ಹೋರಾಟಗಾರರ ನಾಡು ಮಹಾರಾಷ್ಟ್ರದಂತಹ ಮಹಾನ್ ರಾಜ್ಯದ ರಾಜ್ಯ ಸೇವಕ ಅಥವಾ ರಾಜ್ಯಪಾಲ ಆಗಿ ಸೇವೆ ಸಲ್ಲಿಸಲು ಅವಕಾಶ ದೊರೆತಿದ್ದು ನನಗೆ ಸಿಕ್ಕ ಗೌರವ ಎಂದು ಹೇಳಿದ್ದರು.
ಅಮರಿಂದರ್ ಸಿಂಗ್ ಅವರು 2021ರಲ್ಲಿ ಮುಖ್ಯಮಂತ್ರಿ ಸ್ಥಾನವನ್ನು ತೊರೆದ ನಂತರ ಪಂಜಾಬ್ ಲೋಕ ಕಾಂಗ್ರೆಸ್ (PLC) ಎಂಬ ಹೊಸ ಪಕ್ಷವನ್ನು ಕಟ್ಟಿದ್ದರು. ಪಕ್ಷ ಕಟ್ಟಿದ ಕೆಲವು ತಿಂಗಳಲ್ಲೇ ಅವರು ತಮ್ಮ ಹೊಸ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಿದ್ದರು. ನಂತರದಲ್ಲಿ ಡಿಸೆಂಬರ್ನಲ್ಲಿ ಅವರನ್ನು ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರನ್ನಾಗಿ ನೇಮಿಸಲಾಯಿತು.
ಛತ್ರಪತಿ ಶಿವಾಜಿ ಮಹಾರಾಜರ ಕುರಿತಾದ ಕಾಮೆಂಟ್‌ಗಳಿಗಾಗಿ ಕೋಶ್ಯಾರಿ ನಿರಂತರವಾಗಿ ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಹೀಗಾಗಿ, ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿರಬಹುದು. 'ಪ್ರಧಾನಿ ಅವರ ಇತ್ತೀಚಿನ ಮುಂಬೈ ಭೇಟಿಯ ಸಂದರ್ಭದಲ್ಲಿ, ನಾನು ಎಲ್ಲ ರಾಜಕೀಯ ಜವಾಬ್ದಾರಿಗಳಿಂದ ನನ್ನನ್ನು ಮುಕ್ತಗೊಳಿಸುತ್ತೇನೆ ಮತ್ತು ನನ್ನ ಉಳಿದ ಜೀವನವನ್ನು ಓದುವುದು, ಬರವಣಿಗೆ ಮತ್ತು ಇತರ ಅನ್ವೇಷಣೆಗಳಲ್ಲಿ ಕಳೆಯುವ ಬಯಕೆಯನ್ನು ವ್ಯಕ್ತಪಡಿಸಿದ್ದೇನೆ' ಎಂದು ಕೋಶ್ಯಾರಿ ಹೇಳಿದ್ದರು.
ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರವು ಮಹಾರಾಷ್ಟ್ರದ ಚುಕ್ಕಾಣಿ ಹಿಡಿದಾಗ 2019ರ ಸೆಪ್ಟೆಂಬರ್ನಲ್ಲಿ ಕೊಶ್ಯಾರಿ ಅವರು ಮಹಾರಾಷ್ಟ್ರದ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡರು. ಮಹಾ ವಿಕಾಸ್ ಅಘಾಡಿ ಎಂದು ರಾಜ್ಯ ವಿಧಾನ ಪರಿಷತ್ತಿಗೆ 12 ಸದಸ್ಯರ ನೇಮಕ ಮಾಡಿದ ವಿಷಯ ಸೇರಿದಮತೆ ಸೇರಿದಂತೆ ಹಲವು ವಿಷಯಗಳಲ್ಲಿ ಕೊಶ್ಯಾರಿ ಸರ್ಕಾರದೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದರು. ಏತನ್ಮಧ್ಯೆ, 1989 ರಿಂದ 2019 ರವರೆಗೆ ಇಂದೋರ್ ಅನ್ನು ಪ್ರತಿನಿಧಿಸಿದ್ದ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಕೂಡ ಮಹಾರಾಷ್ಟ್ರ ರಾಜ್ಯಪಾಲರ ಹುದ್ದೆಗೆ ಸಂಭಾವ್ಯ ಸ್ಪರ್ಧಿಯಾಗಿದ್ದರು.
ಅಮರಿಂದರ್ ಸಿಂಗ್ ಅವರು ಮಾರ್ಚ್ 11, 1942 ರಂದು ಪಟಿಯಾಲದ ರಾಜಪ್ರಭುತ್ವದ ಮಹಾರಾಜ ಯದ್ವಿಂದರ್ ಸಿಂಗ್ ಅವರ ಕುಟುಂಬದಲ್ಲಿ ಜನಿಸಿದರು. ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ದೇಶದ ಅಪರೂಪದ ರಾಜಕಾರಣಿಗಳಲ್ಲಿ ಒಬ್ಬರು, ಅವರು ಯುದ್ಧದಲ್ಲಿ ಭಾಗವಹಿಸಿದ್ದಾರೆ. 1965 ರಲ್ಲಿ ಪಾಕಿಸ್ತಾನದೊಂದಿಗೆ ಯುದ್ಧ ಪ್ರಾರಂಭವಾದಾಗ, ಅವರು ಭಾರತೀಯ ಸೇನೆಯ ಸಿಖ್ ರೆಜಿಮೆಂಟ್‌ನ ಕ್ಯಾಪ್ಟನ್ ಆಗಿದ್ದರು. ಅಮರಿಂದರ್ ಸಿಂಗ್, ಕ್ಯಾಪ್ಟನ್ ಅಮರಿಂದರ್ ಸಿಂಗ್ ಎಂದೇ ಜನಪ್ರಿಯರು. ಒಬ್ಬ ಭಾರತೀಯ ರಾಜಕಾರಣಿ, ಮಿಲಿಟರಿ ಮ್ಯಾನ್, ಲೇಖಕ, ರಾಜಮನೆತನದವರಾಗಿದ್ದ ಇವರು 2002ರಿಂದ 2007ರವರೆಗೆ ಪಂಜಾಬ್ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರ ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡಲು ಭಗತ್ ಸಿಂಗ್ ಕೋಶ್ಯಾರಿ ನಿರ್ಧಾರ