ನವದೆಹಲಿ: ಮನೆ ಬಾಗಿಲಿಗೆ ತೆರಳಿ ಕೋವಿಡ್ ಲಸಿಕೆ ಹಾಕುವುದು ಕಾರ್ಯಸಾಧ್ಯವಲ್ಲ. ಈ ವಿಚಾರದಲ್ಲಿ ಈಗಿರುವ ಲಸಿಕೆ ನೀತಿಯನ್ನು ರದ್ದುಗೊಳಿಸಲು ಸಾಮಾನ್ಯ ನಿರ್ದೇಶನ ನೀಡುವ ಅಗತ್ಯ ಇಲ್ಲ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ವಿಶೇಷಚೇತನರು ಮತ್ತು ಸಮಾಜದ ದುರ್ಬಲ ವರ್ಗಗಳಿಗೆ ಸೇರಿದ ಜನರ ಮನೆಬಾಗಿಲಿಗೆ ಹೋಗಿ ಕೋವಿಡ್ ಲಸಿಕೆ ನೀಡಲು ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡುವಂತೆ ಒತ್ತಾಯಿಸಿ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಈ ರೀತಿ ಅಭಿಪ್ರಾಯಪಟ್ಟಿತು. ದೇಶದಲ್ಲಿ ವ್ಯಾಕ್ಸಿನೇಷನ್ ಡ್ರೈವ್ ಈಗಾಗಲೇ ಪ್ರಗತಿಯಲ್ಲಿದೆ. ಶೇ.60 ರಷ್ಟು ಜನಸಂಖ್ಯೆಗೆ ಮೊದಲ ಡೋಸ್ ನೀಡಲಾಗಿದೆ ಎಂದು ಪೀಠ ಹೇಳಿತು.
ಇದು ಆಡಳಿತದ ವಿಷಯ. ಸದ್ಯ ಅಸ್ತಿತ್ವದಲ್ಲಿರುವ ನೀತಿಯನ್ನು ರದ್ದುಗೊಳಿಸಲು ಸಾಧ್ಯವಿಲ್ಲ. ಲಡಾಖ್‌ನಲ್ಲಿನ ಪರಿಸ್ಥಿತಿ ಕೇರಳಕ್ಕಿಂತ ಭಿನ್ನವಾಗಿದೆ. ಉತ್ತರ ಪ್ರದೇಶದಲ್ಲಿನ ಪರಿಸ್ಥಿತಿ ಬೇರೆ ರಾಜ್ಯಕ್ಕಿಂತ ಭಿನ್ನವಾಗಿದೆ ಎಂಬ ವಿವರಣೆಯನ್ನು ಕೋರ್ಟ್ ನೀಡಿತು.
ನಗರ ಪ್ರದೇಶಗಳಲ್ಲಿ, ಗ್ರಾಮೀಣ ಪ್ರದೇಶಗಳಿಗಿಂತ ಪರಿಸ್ಥಿತಿ ವಿಭಿನ್ನವಾಗಿದೆ. ಈ ವಿಶಾಲವಾದ ದೇಶದಲ್ಲಿ ಪ್ರತಿಯೊಂದು ರಾಜ್ಯದಲ್ಲೂ ವಿಭಿನ್ನ ರೀತಿಯ ಸಮಸ್ಯೆಗಳಿವೆ. ವ್ಯಾಕ್ಸಿನೇಷನ್ ಕಾರ್ಯಕ್ರಮವು ಈಗಾಗಲೇ ನಡೆಯುತ್ತಿದೆ ಎಂದು ಪೀಠವು ಅರ್ಜಿದಾರರ ವಕೀಲರಿಗೆ ತಿಳಿಸಿತು.