ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಗೆ ಕೇವಲ ಎರಡು ವಾರಗಳು ಬಾಕಿ ಇದೆ. ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವುದು ರಾಜಕೀಯ ಪಕ್ಷಗಳನ್ನು ಆತಂಕಕ್ಕೀಡು ಮಾಡಿದೆ. ಪಕ್ಷದ ಪ್ರಮುಖರೀಗ ಕ್ವಾರಂಟೈನ್ಗೊಳಪಟ್ಟಿದ್ದಾರೆ.
ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ಏಪ್ರಿಲ್ 6ರಂದು ಒಂದೇ ಹಂತದಲ್ಲಿ ನಡೆಯಲಿದೆ. ಮೇ 2ರಂದು ಮತ ಎಣಿಕೆ ನಡೆಯಲಿದೆ. ರಾಜ್ಯದ 234 ಸ್ಥಾನಗಳಿಗೆ ಮತದಾನ ನಡೆಯಲಿದೆ. ಪಕ್ಷಗಳ ಪ್ರಚಾರ ಎಲ್ಲೆಡೆ ಚುರುಕುಗೊಂಡಿದೆ. ಆದ್ರೆ, ಕೊರೊನಾ ಸೋಂಕು ಹರಡುತ್ತಿದ್ದು, ಅನೇಕರು ಕ್ವಾರಂಟೈನ್ಗೆ ಒಳಪಟ್ಟಿದ್ದಾರೆ. ಇದು ಪ್ರಚಾರ ಕಾರ್ಯಕ್ಕೆ ಅಡ್ಡಿಯನ್ನುಂಟು ಮಾಡಿದೆ.
ಕೆಲ ದಿನಗಳ ಹಿಂದೆ ವೆಲಾಚೆರಿ ಕ್ಷೇತ್ರದ ಮಕ್ಕಳ್ ನೀಧಿ ಮೈಯಂ ಪಕ್ಷದ ಅಭ್ಯರ್ಥಿ ಸಂತೋಷ್ ಬಾಬು ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಪರಿಣಾಮ ಕ್ವಾರಂಟೈನ್ಗೊಳಗಾಗಿ ಚುನಾವಣೆಗೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ನಟ-ರಾಜಕಾರಣಿ ಕಮಲ್ ಹಾಸನ್ ಅವರ ಪಕ್ಷದ ಬೆಂಬಲಿಗರು ತಮ್ಮ ಅಭಿಯಾನವನ್ನು ಸ್ಥಗಿತಗೊಳಿಸುವ ಹಂತಕ್ಕೆ ಪರಿಸ್ಥಿತಿ ತಲುಪಿತು.
ಇದನ್ನೂ ಓದಿ: ತಮಿಳುನಾಡು ವಿಧಾನಸಭೆ ಫೈಟ್: 80 ಕೋಟಿ ನಗದು ಸೇರಿ 217.35 ಕೋಟಿ ರೂ. ಮೌಲ್ಯದ ವಸ್ತುಗಳು ವಶ!
ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ಕುರಿತು ಆರೋಗ್ಯ ಕಾರ್ಯದರ್ಶಿ ಜೆ. ರಾಧಾಕೃಷ್ಣನ್ ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿದ್ದು, ಕೋವಿಡ್ ನಿಯಮ ಪಾಲನೆಯನ್ನು ಕಡ್ಡಾಯಗೊಳಿಸಲಾಗಿದೆ. ವಿಧಾನಸಭಾ ಚುನಾವಣೆಗೆ ಸ್ಪರ್ಧೆಯಲ್ಲಿರುವ ಅಭ್ಯರ್ಥಿಗಳು ಸೇರಿದಂತೆ ಎಲ್ಲರೂ ಇದನ್ನೂ ಪಾಲಿಸಲೇಬೇಕೆಂದು ತಿಳಿಸಿದರು.