ಚೆನ್ನೈ: ತಮಿಳುನಾಡಿನ ವಿಧಾನಸಭೆ ಚುನಾವಣೆ ರಂಗೇರಿದ್ದು, ಆಡಳಿತ ಪಕ್ಷ ಎಐಎಡಿಎಂಕೆ ಜೊತೆ ಬಿಜೆಪಿ ಮೈತ್ರಿ ಮಾಡಿಕೊಂಡಿದ್ದರೆ, ಡಿಎಂಕೆ ಜತೆ ಕಾಂಗ್ರೆಸ್ ಕೈಜೋಡಿಸಿ ಕಣಕ್ಕಿಳಿದಿದೆ. ಈಗಾಗಲೇ ಅಭ್ಯರ್ಥಿಗಳ ಪರ ರಾಷ್ಟ್ರೀಯ ನಾಯಕರು ಅಬ್ಬರದ ಪ್ರಚಾರ ನಡೆಸುತ್ತಿದ್ದು, ಇದರ ಮಧ್ಯೆ ಪ್ರತಿಪಕ್ಷ ಡಿಎಂಕೆ ಮುಖಂಡರು ಪ್ರಧಾನಿ ಮೋದಿ ಬಳಿ ವಿಚಿತ್ರವಾದ ಬೇಡಿಕೆ ಮುಂದಿಟ್ಟಿದ್ದಾರೆ.
ಏಪ್ರಿಲ್ 6ರಂದು ತಮಿಳುನಾಡಿನ 234 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಜೆ.ಪಿ.ನಡ್ಡಾ ಸೇರಿದಂತೆ ಅನೇಕ ರಾಷ್ಟ್ರೀಯ ನಾಯಕರು ತಮ್ಮ ತಮ್ಮ ಅಭ್ಯರ್ಥಿಗಳ ಪರ ಭರದ ಪ್ರಚಾರ ನಡೆಸುತ್ತಿದ್ದಾರೆ.
ಇದೀಗ ಕೆಲ ಡಿಎಂಕೆ ಅಭ್ಯರ್ಥಿಗಳು, ದಯವಿಟ್ಟು ನಮ್ಮ ಕ್ಷೇತ್ರಗಳಿಗೆ ಬಂದು ಪ್ರಚಾರ ನಡೆಸುವಂತೆ ಎಂದು ಮೋದಿ ಟಾಂಗ್ ಕೊಟ್ಟಿದ್ದಾರೆ.
ಈ ವಿಚಿತ್ರ ಬೇಡಿಕೆಗೆ ಕಾರಣ ಏನು?
ಪ್ರಧಾನಿ ನರೇಂದ್ರ ಮೋದಿ ಡಿಎಂಕೆ ಅಭ್ಯರ್ಥಿಗಳು ಸ್ಪರ್ಧಿಸಿರುವ ಕ್ಷೇತ್ರಗಳಿಗೆ ಬಂದು ಎಐಎಡಿಎಂಕೆ-ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ರೆ ತಮ್ಮ ಗೆಲುವಿನ ಅಂತರ ಜಾಸ್ತಿ ಇರುತ್ತದೆ ಎಂಬುದು ಅವರ ಲೆಕ್ಕಾಚಾರವಾಗಿದೆ. ಹೀಗಾಗಿ ಈ ಕ್ಷೇತ್ರಗಳಿಗೆ ಬಂದು ಪ್ರಚಾರ ನಡೆಸುವಂತೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಂಗ್ಯವಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ದಯವಿಟ್ಟು ತಿರುಚೆಂಡೂರಿನಲ್ಲಿ ಪ್ರಚಾರ ನಡೆಸಿ, ನಾನು ಇಲ್ಲಿ ಡಿಎಂಕೆ ಅಭ್ಯರ್ಥಿ. ನಿಮ್ಮ ಪ್ರಚಾರದಿಂದ ನನ್ನ ಗೆಲುವಿನ ಅಂತರ ಹೆಚ್ಚಾಗುತ್ತದೆ ಎಂದು ತಿರುಚೆಂಡೂರ್ ಕ್ಷೇತ್ರದ ಡಿಎಂಕೆ ಅಭ್ಯರ್ಥಿ ಅನಿತಾ ರಾಧಾಕೃಷ್ಣನ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ದೆಹಲಿಯಲ್ಲಿ ಲಾಕ್ಡೌನ್ ಇಲ್ಲ: ಖಚಿತಪಡಿಸಿದ ಮುಖ್ಯಮಂತ್ರಿ ಕೇಜ್ರಿವಾಲ್
ರಾಣಿಪೇಟ್ ಕ್ಷೇತ್ರದ ಶಾಸಕ ಹಾಗೂ ಡಿಎಂಕೆ ಅಭ್ಯರ್ಥಿ ಆರ್.ಗಾಂಧಿ ಕೂಡ ಇದೇ ರೀತಿಯಾಗಿ ಟ್ವೀಟ್ ಮಾಡಿದ್ದಾರೆ. ಆತ್ಮೀಯ ಪ್ರಧಾನಿಗಳೇ, ದಯವಿಟ್ಟು ರಾಣಿಪೇಟ್ನಲ್ಲಿ ಪ್ರಚಾರ ನಡೆಸಿ. ನಾನಿಲ್ಲಿ ಡಿಎಂಕೆ ಅಭ್ಯರ್ಥಿ. ನೀವೂ ಇಲ್ಲಿ ಬಂದು ಪ್ರಚಾರ ಮಾಡಿದ್ರೆ ನನ್ನ ಗೆಲುವಿನ ಅಂತರ ಹೆಚ್ಚಾಗುತ್ತದೆ ಎಂದಿದ್ದಾರೆ.
ಇನ್ನು ವಂಡವಾಸಿಯಿಂದ ಸ್ಪರ್ಧಿಸಿರುವ ಡಿಎಂಕೆ ಅಭ್ಯರ್ಥಿ ಅಂಬೆತ್ ಕುಮಾರ್, ಜಯಲಲಿತಾ ಸ್ಪರ್ಧೆ ಮಾಡಿದ್ದ ಅಂಡಿಪಟ್ಟಿ ಕ್ಷೇತ್ರದ ಹಾಲಿ ಶಾಸಕ ಎ. ಮಹಾರಾಜನ್ ಕೂಡ ಇದೇ ರೀತಿಯಲ್ಲಿ ಟ್ವೀಟ್ ಮಾಡಿದ್ದಾರೆ.