ನವ ದೆಹಲಿ : ದೇಶದಲ್ಲಿ ಎಲೆಕ್ಟ್ರಿಕ್ ಚಾಲಿತ ವಾಹನಗಳ ಬಳಕೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಪ್ರೋತ್ಸಾಹಕರ ಯೋಜನೆಯೊಂದನ್ನು ಘೋಷಿಸಿದೆ.
ಎಲೆಕ್ಟ್ರಿಕ್ ಬ್ಯಾಟರಿ ತಯಾರಿಕೆಯ ಅಡ್ವಾನ್ಸ್ ಕೆಮಿಸ್ಟ್ರಿ ಸೆಲ್ (Advance Chemistry Cell -ACC) ತಂತ್ರಜ್ಞಾನದ ಉದ್ಯಮಕ್ಕೆ ಉತ್ಪಾದನೆ ಆಧರಿತ ಪ್ರೋತ್ಸಾಹ ಯೋಜನೆಗೆ ಕೇಂದ್ರದ ಕ್ಯಾಬಿನೆಟ್ ಒಪ್ಪಿಗೆ ನೀಡಿದೆ.
ಉದ್ದೇಶಿತ ಯೋಜನೆಯಡಿ ಎಸಿಸಿ ಬ್ಯಾಟರಿ ತಯಾರಿಕಾ ಕಂಪನಿಗಳಿಗೆ 18 ಸಾವಿರ ಕೋಟಿ ರೂಪಾಯಿ ಮೊತ್ತದ ಪ್ರೋತ್ಸಾಹ ಧನ ಮೀಸಲಿಡಲಾಗಿದೆ ಎಂದು ಸಂಪುಟ ಸಭೆಯ ನಂತರ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ ಜಾವಡೇಕರ ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ಪ್ರಸ್ತಾವಿತ ಯೋಜನೆಯಿಂದ ದೇಶದ ಎಸಿಸಿ ಬ್ಯಾಟರಿ ತಯಾರಿಕಾ ವಲಯಕ್ಕೆ ಸ್ಥಳೀಯವಾಗಿ ಹಾಗೂ ವಿದೇಶಗಳಿಂದ ಸುಮಾರು 45 ಸಾವಿರ ಕೋಟಿ ರೂಪಾಯಿ ಬಂಡವಾಳ ಹೂಡಿಕೆಯಾಗಲಿದೆ ಎಂದು ಸರ್ಕಾರ ಹೇಳಿದೆ.
ಮಾರಾಟ, ಸ್ಥಳೀಯ ತಯಾರಿಕೆ ಮತ್ತು ಇಂಧನ ಕ್ಷಮತೆಗಳ ಆಧಾರದಲ್ಲಿ ಈ ಪ್ರೋತ್ಸಾಹಧನವನ್ನು ನೀಡಲಾಗುವುದು. ಈ ಯೋಜನೆಯು ಎಲೆಕ್ಟ್ರಿಕ್ ವಾಹನ ಉದ್ಯಮ ಮಾತ್ರವಲ್ಲದೆ ದೇಶದ ಸೋಲಾರ ಇಂಧನ ತಯಾರಿಕೆಗೂ ಉತ್ತೇಜನ ನೀಡಲಿದೆ ಎಂದು ಜಾವಡೇಕರ ಹೇಳಿದರು.
ಕಳೆದ ನವೆಂಬರ್ ತಿಂಗಳಿನಲ್ಲಿಯೇ ಕೇಂದ್ರ ಸಂಪುಟವು ಈ ಯೋಜನೆ ಹಾಗೂ ಅಟೊಮೊಬೈಲ್, ಫಾರ್ಮಾಸ್ಯೂಟಿಕಲ್ ಮತ್ತು ಟೆಲಿಕಾಂ ಸೇರಿದಂತೆ ಇತರ ಒಂಬತ್ತು ವಲಯಗಳ ಉತ್ತೇಜನ ಯೋಜನೆಗಳಿಗೆ ತಾತ್ವಿಕ ಒಪ್ಪಿಗೆ ನೀಡಿತ್ತು.