ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟದಲ್ಲಿ ಇಂದು ಕೆಲ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಭಾರತೀಯ ವಾಯುಪಡೆ ಸೇರಿದಂತೆ ಯಾವೆಲ್ಲ ವಿಷಯಗಳ ಬಗ್ಗೆ ಚರ್ಚೆ ಹಾಗೂ ಅನುಮೋದನೆ ನೀಡಲಾಗಿದೆ ಎಂಬುದರ ಬಗ್ಗೆ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡರು.
ವಾಯುಪಡೆಗೆ C-295MW ವಿಮಾನ ಖರೀದಿಗೆ ನಿರ್ಧಾರ
ಭಾರತೀಯ ವಾಯುಪಡೆಗೆ ಮತ್ತಷ್ಟು ಶಕ್ತಿ ತುಂಬುವ ಉದ್ದೇಶದಿಂದ ಕ್ಯಾಬಿನೆಟ್ನಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಏರ್ಬಸ್ ಡಿಫೆನ್ಸ್ ಮತ್ತು ಸ್ಪೇಸ್ನ 56 C-295MW ವಿಮಾನ ಖರೀದಿಗೆ ನಿರ್ಧರಿಸಿದೆ. ಇದರಲ್ಲಿ 16 ವಿಮಾನಗಳು ಸ್ಪೇನ್ನಿಂದ ಖರೀದಿಯಾಗಲಿದ್ದು, ಉಳಿದ 40 ವಿಮಾನಗಳು ಟಾಟಾದಿಂದ ತಯಾರಾಗಲಿವೆ.
ಜವಳಿ ಕ್ಷೇತ್ರಕ್ಕೆ 10,683 ಕೋಟಿ ರೂ. ಘೋಷಣೆ
ಇಂದಿನ ಸಚಿವ ಸಂಪುಟದಲ್ಲಿ ಪ್ರಮುಖವಾಗಿ ಜವಳಿ ಕ್ಷೇತ್ರದ ಅಭಿವೃದ್ಧಿಗಾಗಿ 10,683 ಕೋಟಿ ರೂ. ಘೋಷಣೆ ಮಾಡಲಾಗಿದೆ. ಉತ್ಪಾದನಾ ಲಿಂಕ್ಡ್ ಇನ್ಸಿಂಟಿವ್ಸ್(PLI scheme) ಯೋಜನೆಗೆ ಅನುಮೋದನೆ ನೀಡಲಾಗಿದೆ ಎಂದರು. ಮುಂದಿನ 5 ವರ್ಷದಲ್ಲಿ ಈ ಪ್ರೋತ್ಸಾಹ ಧನ ಜವಳಿ ಕ್ಷೇತ್ರಕ್ಕೆ ನೀಡಲು ನಿರ್ಧರಿಸಲಾಗಿದೆ. ಇದರಿಂದ 7.5 ಲಕ್ಷ ಜನರಿಗೆ ಉದ್ಯೋಗ ಸಿಗಲಿದೆ ಎಂದರು. ಪ್ರಮುಖವಾಗಿ ಉತ್ತರಪ್ರದೇಶ, ಮಹಾರಾಷ್ಟ್ರ, ಪಂಜಾಬ್, ತಮಿಳುನಾಡು, ಆಂಧ್ರಪ್ರದೇಶ ರಾಜ್ಯಗಳಿಗೆ ಈ ಯೋಜನೆಗಳಿಂದ ಪ್ರಯೋಜನವಾಗಲಿವೆ ಎಂದರು.
ಗೋಧಿ-ಸಾಸಿವೆ ಮೇಲಿನ ಬೆಂಬಲ ಬೆಲೆ ಏರಿಕೆ
ಗೋಧಿ ಮೇಲಿನ ಕನಿಷ್ಠ ಬೆಂಬಲ ಬೆಲೆಯನ್ನ ಹೆಚ್ಚಳ ಮಾಡಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಪ್ರತಿ ಕ್ವಿಂಟಲ್ಗೆ ಶೇ.40ರಷ್ಟು ಹೆಚ್ಚಿಗೆಯಾಗಿದೆ. ಸದ್ಯ 2,015 ರೂ. ಆಗಿದೆ. ಸಾಸಿವೆ ಮೇಲಿನ ಕನಿಷ್ಠ ಬೆಂಬಲ ಬೆಲೆ ಕೂಡ 400 ರೂ. ಏರಿಕೆಯಾಗಿದೆ. ಹೀಗಾಗಿ, ಪ್ರತಿ ಕ್ವಿಂಟಲ್ಗೆ 5,050 ರೂ. ಇದೆ.
ಕಬ್ಬು ಬೆಳೆಗಾರರಿಗೆ 290 ರೂ. ಖರೀದಿ ಬೆಲೆ
ಕಬ್ಬು ಬೆಳೆಗಾರರಿಗೆ ಪ್ರತಿ ಕ್ವಿಂಟಾಲ್ಗೆ 290 ರೂ. ಖರೀದಿ ಬೆಲೆ ನೀಡಲು ಕೇಂದ್ರ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಲಾಗಿದೆ. ಇದು ಈವರೆಗಿನ ಗರಿಷ್ಠ ಬೆಲೆಯಾಗಿದೆ. ಇದರಿಂದ ದೇಶದ 5 ಕೋಟಿ ರೈತರಿಗೆ ಇದರಿಂದ ಸಹಾಯವಾಗಲಿದೆ.