ನವದೆಹಲಿ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ನವದೆಹಲಿಯಲ್ಲಿ ಕೇಂದ್ರ ಕೌಶಲ್ಯ ಅಭಿವೃದ್ಧಿ ಖಾತೆ ರಾಜ್ಯ ಸಚಿವರಾದ ರಾಜೀವ್ ಚಂದ್ರಶೇಖರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಜಲ ಸಂಪನ್ಮೂಲ ಸಚಿವರಾದ ಗೋವಿಂದ ಕಾರಜೋಳ, ಕಂದಾಯ ಸಚಿವರಾದ ಆರ್.ಅಶೋಕ್, ಲೋಕೋಪಯೋಗಿ ಖಾತೆ ಸಚಿವರಾದ ಸಿ ಸಿ ಪಾಟೀಲ್, ಸಂಸದ ಶಿವಕುಮಾರ್ ಉದಾಸಿ ಈ ವೇಳೆ ಉಪಸ್ಥಿತರಿದ್ದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ನವದೆಹಲಿಯಲ್ಲಿ ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವರಾದ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಎಲೆಕ್ಟ್ರಾನಿಕ್ ಹಾರ್ಡ್ವೇರ್ ಪಾರ್ಕ್ ನಿರ್ಮಾಣ ಕುರಿತು ಚರ್ಚೆ : ಬಳಿಕ ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವರಾದ ಜಿತೇಂದ್ರ ಸಿಂಗ್ ಅವರನ್ನು ಭೇಟಿಯಾಗಿದ್ದು, ಆಡಳಿತಾತ್ಮಕ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದೇವೆ. ನಂತರ ಕೇಂದ್ರ ಕೌಶಲ್ಯ ಅಭಿವೃದ್ಧಿ ಖಾತೆ ರಾಜ್ಯ ಸಚಿವರಾದ ರಾಜೀವ್ ಚಂದ್ರಶೇಖರ್ ಅವರನ್ನು ಸಹ ಭೇಟಿಯಾದೆವು. ಬೆಂಗಳೂರು-ಕೋಲಾರ ಮಧ್ಯೆ 400 ಎಕರೆ ಜಾಗದಲ್ಲಿ ಎಲೆಕ್ಟ್ರಾನಿಕ್ ಹಾರ್ಡ್ವೇರ್ ಪಾರ್ಕ್ ಮಾಡುವ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದರು.
ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ಅನ್ನು ರಾಜ್ಯಮಟ್ಟದಲ್ಲಿ ಮಾಡುವ ಬಗ್ಗೆ ಸಲಹೆ ಪಡೆದಿದ್ದೇವೆ. ಅಲ್ಲದೇ ಅದಕ್ಕೆ ಬೇಕಾದ ಸಹಾಯ ಮಾಡುವುದಾಗಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ತಿಳಿಸಿದ್ದಾರೆ ಎಂದರು.
ದಾವಸ್ಪೇಟೆ-ಹೊಸೂರು ಸೆಟ್ಲೈಟ್ ಟೌನ್ ರಿಂಗ್ ರೋಡ್ : ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವರಾದ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದ್ದೆವು. ದಾವಸ್ಪೇಟೆಯಿಂದ ಹೊಸೂರಿನವರೆಗೆ ಸೆಟ್ಲೈಟ್ ಟೌನ್ ರಿಂಗ್ ರೋಡ್ (ಎಸ್ಟಿಟಿಆರ್) ಬಗ್ಗೆ ಚರ್ಚಿಸಿದ್ದೇವೆ. ಭಾರತ ಮಾಲಾ-1ರಲ್ಲಿ ಈ ಯೋಜನೆ ತೆಗೆದುಕೊಂಡಿದ್ದಾರೆ. ಇನ್ನೇನು ಆರು ತಿಂಗಳಲ್ಲಿ ಈ ಕಾಮಗಾರಿ ಆರಂಭವಾಗಲಿದೆ. ಇದು ವಾಹನ ದಟ್ಟಣೆ ನಿಯಂತ್ರಣಕ್ಕೆ ಸಹಕಾರಿಯಾಗಲಿದೆ ಎಂದರು.
ಓದಿ: ಕಲಬುರಗಿ ಪಾಲಿಕೆ ಗೆಲ್ಲಲು ಮೈತ್ರಿ ವಿಚಾರ: ದೇವೇಗೌಡ, ಹೆಚ್ಡಿಕೆ ಭೇಟಿ ಮಾಡಿದ ಪಾಲಿಕೆ ಸದಸ್ಯರು
ಶಿರಾಡಿ ಘಾಟ್ನಲ್ಲಿ ಚತುಷ್ಪಥದ ಬಗ್ಗೆ ಮಾತನಾಡಿದ್ದೇವೆ. ಅದಕ್ಕೂ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿದೆ. ವಿಜಯಪುರ-ಸಂಕೇಶ್ವರ ರಸ್ತೆಯನ್ನು 80 ಕಿ.ಮೀ ನಿಂದ 160 ಕಿ.ಮೀಗೆ ವಿಸ್ತರಿಸಬೇಕೆಂದು ಹೇಳಿದ್ದೇವೆ. ಅದಕ್ಕೂ ಈಗಾಗಲೇ ಒಪ್ಪಿದ್ದಾರೆ. ನರಗುಂದ-ಕುಷ್ಟಗಿ, ಕಾರವಾರದ ಕೈಗಾ-ಇಳಕಲ್, ನರಗುಂದ-ಇಟಗಿ ಸೇರಿ ಈಗಾಗಲೇ ಘೋಷಿಸಿರುವ ನಾಲ್ಕರಿಂದ ಐದು ರಾಷ್ಟ್ರೀಯ ಹೆದ್ದಾರಿಗಳನ್ನು ಭಾರತ ಮಾಲಾ-2ರಲ್ಲಿ ಪೂರ್ಣಗೊಳಿಸುವಂತೆ ಕೋರಿದ್ದೇವೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
ಆಪ್ಟಿಕಲ್ ಫೈಬರ್ ಕೇಬಲ್ ಜಾಲವನ್ನು ವಿಸರಣೆ ಮಾಡುವ ಸಲುವಾಗಿ ಯೋಜನೆ ಮಾಡಲು ಮನವಿ ಮಾಡಿದ್ದೇವೆ. ಅದಕ್ಕೆ ಸಹಾಯ ಮಾಡುವುದಾಗಿ ಕೇಂದ್ರ ಸಚಿವರು ತಿಳಿಸಿದ್ದಾರೆ. ಹೀಗೆ ನಿತಿನ್ ಗಡ್ಕರಿ ಅವರ ಜತೆ ಬಹಳ ಪ್ರಮುಖವಾದ ರಸ್ತೆಗಳ ಬಗ್ಗೆ ಒಂದು ಉತ್ತಮ ಸಕಾರಾತ್ಮಕ ಸಭೆಯಾಗಿದೆ. ರಾಜ್ಯದ ರಸ್ತೆಗಳ ಅಭಿವೃದ್ಧಿಗೆ ಸಹಾಯ ಮಾಡಲು ಕೇಂದ್ರ ಸರ್ಕಾರ ಒಪ್ಪಿದೆ. ಪ್ರವಾಹ ಬಂದಾಗ ಸುಮಾರು ₹184 ಕೋಟಿ ವೆಚ್ಚದ ರಾಷ್ಟ್ರೀಯ ಹೆದ್ದಾರಿಗಳ ನೆರೆ ಹಾನಿಯಾಗಿತ್ತು, ಅದನ್ನು ಕೊಡಲು ಸಹ ಅವರು ಒಪ್ಪಿದ್ದಾರೆ ಎಂದರು.
ನಿಫಾ ವೈರಸ್ ಭೀತಿ : ನಿಫಾ ವೈರಸ್ ಕುರಿತು ರಾಜ್ಯದಲ್ಲಿ ಕೈಗೊಂಡ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಇಂದಿನಿಂದ ಮತ್ತಷ್ಟು ಬಿಗಿ ಕ್ರಮಗಳನ್ನು ಕರ್ನಾಟಕ-ಕೇರಳ ಗಡಿಯಲ್ಲಿ ಜಾರಿಗೊಳಿಸಲಾಗುವುದು ಎಂದರು.
ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣ : ಇದೇ ವೇಳೆ ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ, ಅದು ನನ್ನ ಕೆಲಸವಲ್ಲ, ಪೊಲೀಸರ ಕೆಲಸ ಎಂದು ಸಿಎಂ ಪ್ರತಿಕ್ರಿಯಿಸಿದರು.
ಓದಿ: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉತ್ತಮ ಆಡಳಿತ ನೀಡುವ ವಿಶ್ವಾಸವಿದೆ: ಫಾರೂಕ್ ಅಬ್ದುಲ್ಲಾ