ಲಖನೌ (ಉತ್ತರಪ್ರದೇಶ): ಲೋಕಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲಾಗುವುದು ಎಂದು ಘೋಷಿಸಿದ್ದ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ರಾಷ್ಟ್ರೀಯ ಅಧ್ಯಕ್ಷೆ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಅವರು ವಿಪಕ್ಷಗಳ I.N.D.I.A ಕೂಟ ಸೇರುವ ಸಾಧ್ಯತೆ ಇದೆ. ಜನವರಿ 15 ರಂದು ತಮ್ಮ 68ನೇ ಹುಟ್ಟುಹಬ್ಬದಂದು ಇಂಡಿಯಾ ಕೂಟದೊಂದಿಗೆ ಮೈತ್ರಿ ಘೋಷಣೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ಉತ್ತರಪ್ರದೇಶದಲ್ಲಿ ದಲಿತ ಸಮುದಾಯದ ಮೇಲೆ ಹಿಡಿತ ಹೊಂದಿರುವ ಮಾಯಾವತಿ ಅವರನ್ನು ಮಹಾಘಟಬಂಧನಕ್ಕೆ ಸೇರಿಸಿಕೊಳ್ಳುವ ಬಗ್ಗೆ ಕಾಂಗ್ರೆಸ್, ಎಸ್‌ಪಿ ಸೇರಿದಂತೆ ವಿಪಕ್ಷಗಳು ಆಸಕ್ತಿ ತೋರಿಸಿವೆ. ನಾಡಿದ್ದು ಜನ್ಮದಿನದಂದು ಕಾಂಗ್ರೆಸ್ನ ಹಿರಿಯ ನಾಯಕರು ಬಿಎಸ್‌ಪಿ ನಾಯಕಿಯನ್ನು ಭೇಟಿ ಮಾಡಿ ಸೀಟು ಹಂಚಿಕೆ ಬಗ್ಗೆ ಚರ್ಚೆ ಮಾಡಲಿದ್ದಾರೆ ಎಂದು ಹೇಳಲಾಗಿದ್ದರೆ, ಇತ್ತ ಎಸ್‌ಪಿ ಕೂಡ ಹೇಗಾದರೂ ಮಾಡಿ ದಲಿತ ನಾಯಕಿಯನ್ನು ಮೈತ್ರಿ ಸೇರಿಸಿಕೊಳ್ಳುವ ಬಗ್ಗೆ ಇಚ್ಛೆ ಹೊಂದಿದೆ ಎಂದು ತಿಳಿದುಬಂದಿದೆ.
ಉತ್ತರಪ್ರದೇಶದಲ್ಲಿ ಘಟಬಂಧನ್; ಕಾಂಗ್ರೆಸ್, ಬಿಎಸ್‌ಪಿ, ಎಸ್‌ಪಿ, ರಾಷ್ಟ್ರೀಯ ಲೋಕದಳ, ಅಪ್ನಾ ದಳ, ಕಮೆರವಾಡಿ, ಮಹಾನ್ ದಳ ಮತ್ತು ಆಜಾದ್ ಸಮಾಜ ಪಕ್ಷಗಳು ಒಟ್ಟಾಗಿ ಸೇರಿ ಬಿಜೆಪಿ ವಿರುದ್ಧ ಲೋಕಸಭೆ ಚುನಾವಣೆಯಲ್ಲಿ ಸೆಣಸಲು ತಂತ್ರ ರೂಪಿಸಿವೆ. ಈ ಮೊದಲು ಯಾವುದೇ ಕೂಟದ ಜೊತೆಗೆ ಸೇರಲ್ಲ ಎಂದು ಘೋಷಿಸಿದ್ದ ಬಿಎಸ್ಪಿಯನ್ನು ಇಂಡಿಯಾ ಮೈತ್ರಿಯಲ್ಲಿ ಸೇರಿಸಿಕೊಳ್ಳಲು ಎಸ್‌ಪಿ ನಾಯಕ, ಮಾಜಿ ಸಿಎಂ ಅಖಿಲೇಶ್ ಯಾದವ್ ಅವರು ಉತ್ಸುಕತೆ ತೋರಿದ್ದಾರೆ. ಇದಕ್ಕೆ ಕಾಂಗ್ರೆಸ್ ಕೂಡ ಕೈಜೋಡಿಸಿದೆ.
ಸೀಟು ಹಂಚಿಕೆ ಕುರಿತು ಸಮಾಜವಾದಿ ಪಕ್ಷ ಸೂತ್ರ ಸಿದ್ಧಪಡಿಸಿದೆ ಎಂದು ಮೂಲಗಳು ತಿಳಿಸಿವೆ. ಎಸ್‌ಪಿ 25 ರಿಂದ 30 ಸ್ಥಾನಗಳಲ್ಲಿ ಬಿಎಸ್ಪಿಗೆ ಬೆಂಬಲ ನೀಡಲು ಸಿದ್ಧವಾಗಿದೆ ಎಂದು ಹೇಳಲಾಗಿದೆ. ಜೊತೆಗೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಜನವರಿ 15 ರಂದು ಬಿಎಸ್‌ಪಿ ವರಿಷ್ಠೆಯನ್ನು ಅವರ ಜನ್ಮದಿನದಂದೇ ಭೇಟಿಯಾಗಿ ಸೀಟು ಹಂಚಿಕೆ ಕುರಿತು ಚರ್ಚಿಸಬಹುದು. ಇಂಡಿಯಾ ಕೂಟದಲ್ಲಿ ಸೇರುವಂತೆ ಮನವೊಲಿಸುವ ಪ್ರಯತ್ನ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.
ಜನರ ಜೊತೆ ಜನ್ಮದಿನ: ಬಹುಜನ ಸಮಾಜ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಅವರು ತಮ್ಮ ಹುಟ್ಟುಹಬ್ಬವನ್ನು ಜನಸಾಮಾನ್ಯರೊಂದಿಗೆ ಆಚರಿಸಿಕೊಳ್ಳಲು ಮುಂದಾಗಿದ್ದಾರೆ. ದಲಿತ ಸಮುದಾಯದ ಜನರನ್ನು ಸೆಳೆಯಲು ಅವರೊಂದಿಗೆ ಕೇಕ್ ಕತ್ತರಿಸಲು ಕಾರ್ಯಕರ್ತರಿಗೆ ಸೂಚಿಸಲಾಗಿದೆ. ನಾಲ್ಕು ಬಾರಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿರುವ ಮಾಯಾವತಿ ಅವರು ದೇಶದ ಮೊದಲ ದಲಿತ ಸಿಎಂ ಆಗಿದ್ದಾರೆ.
ಇದನ್ನೂ ಓದಿ: ದೆಹಲಿ ಅಬಕಾರಿ ಹಗರಣ: ಸಿಎಂ ಅರವಿಂದ್ ಕೇಜ್ರಿವಾಲ್ಗೆ ನಾಲ್ಕನೇ ಸಲ ಇಡಿ ಸಮನ್ಸ್