ನವದೆಹಲಿ/ಜಮ್ಮು: ಗಡಿಗಳಲ್ಲಿ ಭಯೋತ್ಪಾದಕರು ಒಳನುಸುಳಲು ಬಳಸುವ ಸುರಂಗ ಮಾರ್ಗಗಳನ್ನು ಪತ್ತೆಹಚ್ಚಲು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಇದೇ ಮೊದಲ ಬಾರಿಗೆ ರಾಡಾರ್ ಡ್ರೋನ್‌ಗಳನ್ನು ಪರಿಚಯಿಸಿದೆ. ಜಮ್ಮುವಿನ ಭಾರತ ಮತ್ತು ಪಾಕಿಸ್ತಾನದ ಅಂತಾರಾಷ್ಟ್ರೀಯ ಗಡಿಯಲ್ಲಿ ಈ ರಾಡಾರ್ ಡ್ರೋನ್‌ಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಗಡಿ ರಕ್ಷಣೆಗೆ ರಾಡಾರ್ ಡ್ರೋನ್ ಬಳಕೆ : ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ತಂತ್ರಜ್ಞಾನವನ್ನು ಬಳಸಿಕೊಂಡು ಭಯೋತ್ಪಾದಕರು ಭಾರತದೊಳಗೆ ನುಸುಳುವುದನ್ನು ಪತ್ತೆ ಹಚ್ಚಲು ಈ ಡ್ರೋನ್‌ಗಳು ಸಹಕಾರಿಯಾಗಿದೆ. ಅಲ್ಲದೆ ಈ ಸುರಂಗ ಮಾರ್ಗಗಳನ್ನು ಬಳಸಿಕೊಂಡು ಮಾದಕ ದ್ರವ್ಯ, ಶಸ್ತ್ರಾಸ್ತ್ರ, ಮದ್ದುಗುಂಡುಗಳ ಕಳ್ಳಸಾಗಣೆ ನಡೆಯುವುದರಿಂದ ಇದನ್ನು ಪತ್ತೆ ಹಚ್ಚಲು ರಾಡಾರ್ ಡ್ರೋನ್ ಸಹಕಾರಿಯಾಗಿದೆ. ಇನ್ನು ಈ ಡ್ರೋನ್ ಮೂಲಕ ಎದುರಾಳಿ ಮೇಲೆ ದಾಳಿ ನಡೆಸಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ.
ಕಳೆದ ಮೂರು ವರ್ಷಗಳಲ್ಲಿ 5 ಸುರಂಗ ಪತ್ತೆ : ಕಳೆದ ಮೂರು ವರ್ಷಗಳಲ್ಲಿ ಜಮ್ಮುವಿನ (ಭಾರತ-ಪಾಕಿಸ್ತಾನ ಅಂತರಾಷ್ಟ್ರೀಯ ಗಡಿ) ಸುಮಾರು 192 ಕಿ.ಮೀ ಗಡಿ ಸರಹದ್ದಿನಲ್ಲಿ ಐದು ಸುರಂಗಗಳನ್ನು ಬಿಎಸ್‌ಎಫ್ ಪತ್ತೆ ಮಾಡಿತ್ತು. ಇನ್ನು ಅಧಿಕೃತ ಅಂಕಿ ಅಂಶಗಳ ಪ್ರಕಾರ, 2020 ಮತ್ತು 2021ರಲ್ಲಿ ಗಡಿಗಳ ನಡುವೆ ಎರಡು ಸುರಂಗಗಳು ಪತ್ತೆಯಾಗಿತ್ತು ಎಂದು ಹೇಳಲಾಗಿದೆ. ಕಳೆದ ವರ್ಷದಲ್ಲಿ ಒಂದು ಸುರಂಗ ಪತ್ತೆಯಾಗಿತ್ತು. ಈ ಎಲ್ಲಾ ಸುರಂಗ ಮಾರ್ಗಗಳು ಜಮ್ಮುವಿನ ಇಂದ್ರೇಶ್ವರ ನಗರ ವಲಯದಲ್ಲಿ ಕಂಡುಬಂದಿರುವುದಾಗಿ ತಿಳಿದುಬಂದಿದೆ.
ಈ ಬಗ್ಗೆ ಬಿಎಸ್ಎಫ್ ಅಧಿಕಾರಿಯೊಬ್ಬರು ಮಾತನಾಡಿ, ಜಮ್ಮು ಸೆಕ್ಟರ್ನ ಭಾರತ ಮತ್ತು ಪಾಕಿಸ್ತಾನ ಅಂತರಾಷ್ಟ್ರೀಯ ಗಡಿಯಲ್ಲಿ ಸುರಂಗ ಮಾರ್ಗಗಳನ್ನು ಪತ್ತೆಹಚ್ಚುವ ದೃಷ್ಟಿಯಿಂದ ಮತ್ತು ಅಪಾಯವನ್ನು ಎದುರಿಸುವ ದೃಷ್ಟಿಯಿಂದ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗಿದೆ. ಪಾಕಿಸ್ತಾನದಿಂದ ಭಾರತದೊಳಗೆ ನುಸುಳಲು ಯತ್ನಿಸುವ ಭಯೋತ್ಪಾದರಿಂದ ಉಂಟಾಗುವ ಅಪಾಯವನ್ನು ಕಂಡುಕೊಳ್ಳಲು ಡ್ರೋನ್ ರಾಡಾರ್ ಗಳನ್ನು ನಿಯೋಜಿಸಲಾಗಿದೆ ಎಂದು ಹೇಳಿದರು.
ಸದ್ಯ ಗಡಿಯಲ್ಲಿ ನಿಯೋಜಿಸಲಾಗಿರುವ ಡ್ರೋನ್ ರಾಡಾರ್‌ಗಳನ್ನು ಭಾರತದಲ್ಲಿಯೇ ಅಭಿವೃದ್ಧಿಪಡಿಸಲಾಗಿದೆ. ಇದು ಗಡಿಯಲ್ಲಿನ ಸುರಂಗಗಳನ್ನು ಪತ್ತೆ ಹಚ್ಚಿ ಅವುಗಳ ಆಳ ಮತ್ತು ಅಗಲವನ್ನು ಅಂದಾಜಿಸಲು ಬೇಕಾದ ರೇಡಿಯೊ ತರಂಗ ತಂತ್ರಜ್ಞಾನವನ್ನು ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಡಿಯಲ್ಲಿನ ಸುರಂಗ ಪತ್ತೆಗೆ ಸಹಾಯಕಾರಿ : ಡ್ರೋನ್ ರಾಡಾರ್‌ನ ನಿರ್ದಿಷ್ಟ ವಿವರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಇದು ನಮ್ಮ ಭದ್ರತಾ ಪಡೆಗಳಿಗೆ ಹೆಚ್ಚು ಉಪಕಾರಿಯಾಗಿದೆ ಎಂದು ತಿಳಿಸಿದರು. ಇನ್ನು ಈ ಡ್ರೋನ್‌ನಲ್ಲಿ ರಾಡಾರ್‌ಗಳನ್ನು ಅಳವಡಿಸಲಾಗಿದೆ. ಇದು ಗಡಿಯಲ್ಲಿರುವ ಸುರಂಗ ಮಾರ್ಗಗಳನ್ನು ಗಡಿಯಿಂದ ಸುಮಾರು 400 ಮೀಟರ್ ದೂರದವರೆಗೆ ಕಣ್ಗಾವಲು ಮಾಡುತ್ತದೆ. ಇನ್ನು ಈ ಸುರಂಗ ಮಾರ್ಗಗಳನ್ನು ಪತ್ತೆ ಹಚ್ಚಲು ದೂರದಿಂದಲೇ ಕಾರ್ಯಾಚರಣೆ ನಡೆಸಬಹುದಾಗಿದೆ.
ಈ ಡ್ರೋನ್ ರಾಡಾರ್‌ನ ಸಮಸ್ಯೆಯೆಂದರೆ ಡ್ರೋನ್‌ಗಳು ಹಾರುವಾಗ ಧೂಳು ಉಂಟಾಗುತ್ತದೆ. ಇದರಿಂದ ರಾಡಾರ್ನಿಂದ ಉಂಟಾಗುವ ರೇಡಿಯೊ ತರಂಗಗಳಿಗೆ ಅಡ್ಡಿಯಾಗುತ್ತದೆ. ಇದಿನ್ನೂ ಪ್ರಾಯೋಗಿಕವಾಗಿದ್ದು, ಇನ್ನಷ್ಟು ಅಭಿವೃದ್ದಿ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಜಮ್ಮುವನ್ನು ಒಳಗೊಂಡಿರುವ ಪಾಕಿಸ್ತಾನದ ಅಂತಾರಾಷ್ಟ್ರೀಯ ಗಡಿ 192 ಕಿ.ಮೀ ಹೊಂದಿದೆ. ಒಟ್ಟು ಪಂಜಾಬ್, ರಾಜಸ್ಥಾನ ಮತ್ತು ಗುಜರಾತ್ ಒಳಗೊಂಡ ಪಾಕಿಸ್ತಾನದ ಗಡಿ ಸುಮಾರು ಉದ್ದ 2289 ಕಿಲೋಮೀಟರ್ ಹೊಂದಿದೆ. ಈ ಪ್ರದೇಶಗಳಲ್ಲಿ ಮಣ್ಣು ತುಂಬಾ ಸಡಿಲವಾಗಿದ್ದು ಸುರಂಗದ ಅಪಾಯ ಯಾವಾಗಲೂ ಇದ್ದೇ ಇದೆ. ಕಳೆದ ದಶಕದಲ್ಲಿ ಬಿಎಸ್ಎಫ್ ಪಡೆ ಸುಮಾರು ಹತ್ತು ಸುರಂಗ ಮಾರ್ಗಗಳನ್ನು ಪತ್ತೆ ಮಾಡಿತ್ತು.
ಇದನ್ನೂ ಓದಿ : ಜ. 13ರಂದು ವಿಶ್ವದ ಅತಿ ಉದ್ದದ ಗಂಗಾ ವಿಲಾಸ್ ನೌಕೆಗೆ ಮೋದಿ ಚಾಲನೆ.. ಈ ಹಡಗಿನಲ್ಲಿದೆ ಐಷಾರಾಮಿ ಸೌಲಭ್ಯ