ಉತ್ತರ 24 ಪರಗಣಗಳು(ಪಶ್ಚಿಮ ಬಂಗಾಳ) : ಎರಡು ಪ್ರತ್ಯೇಕ ಘಟನೆಗಳಲ್ಲಿ ಬಾರ್ಡರ್ ಸೆಕ್ಯೂರಿಟಿ ಫೋರ್ಸ್ (ಬಿಎಸ್‌ಎಫ್) ಕಾರ್ಯಾಚರಣೆ ನಡೆಸಿ ಇಬ್ಬರು ಭಾರತೀಯ ಸ್ಮಗ್ಲರ್ ಜೊತೆ ಸುಮಾರು ಹನ್ನೊಂದುವರೆ ಕೆಜಿಗೂ ಹೆಚ್ಚು ಚಿನ್ನವನ್ನು ವಶಕ್ಕೆ ಪಡೆದಿರುವ ಘಟನೆ ಉತ್ತರ 24 ಪರಗಣಗಳು ಜಿಲ್ಲೆಯಲ್ಲಿ ನಡೆದಿದೆ.
ವಶಪಡಿಸಿಕೊಂಡ 74 ಚಿನ್ನದ ಬಿಸ್ಕೆಟ್‌ಗಳ ಒಟ್ಟು ತೂಕ 11.620 ಕೆಜಿ ಆಗಿದ್ದು, ಜಾಗತಿಕ ಮಾರುಕಟ್ಟೆಯಲ್ಲಿ ಇದರ ಮೌಲ್ಯ ಅಂದಾಜು 6,15,18,152 ರೂ. ಆಗಿದೆ. ಕಳ್ಳಸಾಗಣೆದಾರರು ಭದ್ರತಾ ಪಡೆಗಳ ಕಣ್ತಪ್ಪಿಸಿ ಬಾಂಗ್ಲಾದೇಶದಿಂದ ಭಾರತಕ್ಕೆ ಈ ಚಿನ್ನದ ಬಿಸ್ಕೆಟ್‌ಗಳನ್ನು ಅಕ್ರಮವಾಗಿ ತೆಗೆದುಕೊಂಡು ಹೋಗಲು ಪ್ರಯತ್ನಿಸುತ್ತಿದ್ದರು ಎಂದು ಬಿಎಸ್‌ಎಫ್ ತಿಳಿಸಿದೆ.
ಸೋಮವಾರ 179 ಬೆಟಾಲಿಯನ್ ಬಿಎಸ್ಎಫ್ ಪಡೆಗಳು ಐಸಿಪಿ ಪೆಟ್ರಾಪೋಲ್ನಲ್ಲಿ ವಾಹನಗಳನ್ನು ಪರಿಶೀಲಿಸುತ್ತಿದ್ದವು. ಬೆಳಗ್ಗೆ 11.15ಕ್ಕೆ ರಫ್ತು ಸರಕುಗಳನ್ನು ಇಳಿಸಿ ವಾಪಸ್ ಬಾಂಗ್ಲಾದೇಶದ ಬೆನಾಪೋಲ್ದಿಂದ ಭಾರತಕ್ಕೆ ಹಿಂತಿರುಗುತ್ತಿದ್ದ ಟ್ರಕ್ ಅನ್ನು ಪರಿಶೀಲಿಸಿದ್ದಾರೆ. ಈ ವೇಳೆ ಯೋಧರಿಗೆ ಚಾಲಕ ಸೀಟಿನ ಹಿಂಬದಿ ಕಪ್ಪು ಬಟ್ಟೆಯಲ್ಲಿ ಸುತ್ತಿದ ದೊಡ್ಡ ಪ್ಯಾಕೆಟ್ವೊಂದು ಪತ್ತೆಯಾಗಿದೆ. ಪ್ಯಾಕೆಟ್ ಅನ್ನು ಓಪನ್ ಮಾಡಿ ನೋಡಿದಾಗ 70 ಚಿನ್ನದ ಬಿಸ್ಕತ್ತುಗಳು ಮತ್ತು ಮೂರು ಚಿನ್ನದ ತುಂಡುಗಳು ಪತ್ತೆಯಾಗಿವೆ.
ಓದಿ: ರಾಜ್ಯದ ಪ್ರಮುಖ ನಗರಗಳಲ್ಲಿ ಇಂದಿನ ಗೋಲ್ಡ್ ರೇಟ್ ಹೀಗಿದೆ..
ವಶಪಡಿಸಿಕೊಂಡ ಚಿನ್ನದ ಬಿಸ್ಕತ್ತುಗಳ ಒಟ್ಟು ಮೌಲ್ಯ 5,98,54,165 ರೂ. ಎಂದು ಅಂದಾಜಿಸಲಾಗಿದೆ. ಯೋಧರು ಟ್ರಕ್ ಚಾಲಕನನ್ನು ವಿಚಾರಣೆಗಾಗಿ ಕಸ್ಟಡಿಗೆ ತೆಗೆದುಕೊಂಡು ತನಿಖೆ ಮುಂದುವರಿಸಿದ್ರು. ಬಂಧಿತ ಟ್ರಕ್ ಚಾಲಕನನ್ನು ಬಂಗಾಂವ್‌ನ ಜೋಯ್‌ಪುರ ನಿವಾಸಿ ರಾಜ್ ಮಂಡಲ್ (26) ಎಂದು ಗುರುತಿಸಲಾಗಿದೆ.
ರಾಜ್ ಮಂಡಲ್ ನಿಯಮಿತವಾಗಿ ಬಾಂಗ್ಲಾದೇಶಕ್ಕೆ ರಫ್ತು ಸರಕುಗಳನ್ನು ಸಾಗಿಸುತ್ತಾರೆ. ಸೋಮವಾರ ಬಾಂಗ್ಲಾದೇಶದಿಂದ ಖಾಲಿ ಟ್ರಕ್‌ನೊಂದಿಗೆ ಹಿಂತಿರುಗುತ್ತಿದ್ದಾಗ, ಸಹಾಬುದ್ದೀನ್ ಮಂಡಲ್ ಎಂಬ ಭಾರತೀಯ ಪ್ರಜೆಯನ್ನು ಚಾಲಕ ಬೆಳಗ್ಗೆ 9.30ಕ್ಕೆ ಸಂಪರ್ಕಿಸಿದ್ದಾನೆ. ಈ ವೇಳೆ ಸಹಾಬುದ್ದೀನ್ ಕಪ್ಪು ಬ್ಯಾಗ್ವೊಂದು ನೀಡಿ ಪಿಂಟು ಎಂಬ ವ್ಯಕ್ತಿ ಕೊಡುವಂತೆ ಹೇಳಿದ್ದಾನೆ. ಡ್ರೈವರ್ ಸ್ವದೇಶಕ್ಕೆ ಮರಳುತ್ತಿದ್ದಾಗ ವಾಹನ ತಪಾಸಣೆ ಮಾಡಿದಾಗ ವಿಷಯ ಬೆಳಕಿಗೆ ಬಂದಿದೆ ಎಂದು ಬಿಎಸ್‌ಎಫ್ ತಿಳಿಸಿದೆ.
ಸರಕು ವಿತರಣೆಯ ನಂತರ ಸಹಾಬುದ್ದೀನ್ ಮಂಡಲದಿಂದ 10,000 ರೂ.ಗಳನ್ನು ಪಡೆಯಬೇಕಾಗಿತ್ತು ಎಂದು ಮಂಡಲ್ ಹೇಳಿದರು. ಇನ್ನೊಂದು ಘಟನೆಯಲ್ಲಿ ಸೋಮವಾರ ಬೆಳಗ್ಗೆ 6.20ಕ್ಕೆ ಬಾರ್ಡರ್ ಔಟ್ ಪೋಸ್ಟ್ ಜಯಂತಿಪುರದಲ್ಲಿ BSFನ 158 ಬೆಟಾಲಿಯನ್ ಪಡೆಗಳು ನಿಯಮಿತ ತಪಾಸಣೆಯ ಸಂದರ್ಭದಲ್ಲಿ ಶಂಕಿತನಿಂದ 466.62 ಗ್ರಾಂ ತೂಕದ ನಾಲ್ಕು ಚಿನ್ನದ ಬಿಸ್ಕತ್ಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ವ್ಯಕ್ತಿಯನ್ನು ಮರುಬ್ ಮಂಡಲ್ (36) ಎಂದು ಗುರುತಿಸಲಾಗಿದೆ.
ವಿಚಾರಣೆ ವೇಳೆ ಆ ವ್ಯಕ್ತಿ ಚಿನ್ನ ಕಳ್ಳಸಾಗಣೆ ಮಾಡುತ್ತಿರುವುದರ ಬಗ್ಗೆ ಒಪ್ಪಿಕೊಂಡಿದ್ದಾನೆ. ಬಾಂಗ್ಲಾದೇಶದಿಂದ ಚಿನ್ನವನ್ನು ತೆಗೆದುಕೊಂಡು ಬಂದಿರುವುದಾಗಿ ಹೇಳಿದ್ದಾನೆ. ಗಡಿ ಭದ್ರತಾ ಪಡೆಯ ಡ್ಯೂಟಿ ಪಾಯಿಂಟ್ ದಾಟಿದ ನಂತರ ಈ ಚಿನ್ನವನ್ನು ಅನ್ಸರ್ ತಂದೆ ಹಫೀಜುಲ್ ಶೇಖ್ ಅವರಿಗೆ ಹಸ್ತಾಂತರಿಸುವುದಾಗಿ ಹೇಳಿಕೆ ನೀಡಿದ್ದಾನೆ.
ಬಂಧಿತ ಕಳ್ಳಸಾಗಾಣಿಕೆದಾರನು ಕೆಲವು ದೊಡ್ಡ ಸ್ಮಗ್ಲರ್‌ಗಳ ಹೆಸರುಗಳನ್ನು ಬಹಿರಂಗಪಡಿಸಿದ್ದಾನೆ. ಗಯಾಸುದ್ದೀನ್ ಮಂಡಲ್, ಸಲಾವುದ್ದೀನ್ ಶೇಖ್ ಮತ್ತು ಮೊಹಿಯುದ್ದೀನ್ ಶೇಖ್, ಅವರೆಲ್ಲರೂ ಜಯಂತಿಪುರ ಗ್ರಾಮದ ನಿವಾಸಿಗಳು. ಇವರೆಲ್ಲ ಗಡಿ ಆಚೆ ವಾಸಿಸುತ್ತಿದ್ದಾರೆ. ಬಂಧಿತ ಕಳ್ಳಸಾಗಣೆದಾರರನ್ನು ವಶಪಡಿಸಿಕೊಂಡ ಚಿನ್ನದೊಂದಿಗೆ ಕಸ್ಟಮ್ಸ್ ಕಚೇರಿ ಪೆಟ್ರಾಪೋಲ್‌ಗೆ ಹಸ್ತಾಂತರಿಸಲಾಗಿದೆ ಎಂದು ಬಿಎಸ್‌ಎಫ್ ತಿಳಿಸಿದೆ.