ನವದೆಹಲಿ: ಬ್ರಿಂಟನ್ ಫಾರ್ಮಾಸ್ಯೂಟಿಕಲ್ ಕಂಪನಿಯು ತಾನು ತಯಾರಿಸುವ ಸಣ್ಣ ಹಾಗೂ ಮಧ್ಯಮ ಗತಿಯ ಕೋವಿಡ್-19 ಸೋಂಕು ನಿವಾರಣೆಗೆ ಬಳಸಲಾಗುವ ಫಾವಿಟೋನ್ (ಫಾವಿಪಿರಾವಿರ್ 400 ಮಾತ್ರೆ) ಮಾತ್ರೆಗಳ ಉತ್ಪಾದನೆಯನ್ನು ಮೂರು ಪಟ್ಟು ಹೆಚ್ಚಿಸಿದೆ. ಈ ಕುರಿತು ಕಂಪನಿಯ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.
ಫಾವಿಟೋನ್ ಬ್ರ್ಯಾಂಡ್ ಹೆಸರಿನಲ್ಲಿ ಫಾವಿಪಿರಾವಿರ್ 400 ಎಂಜಿ ಮಾತ್ರೆಗಳ ಉತ್ಪಾದನೆಗೆ ಕಳೆದ ಆಗಸ್ಟ್ನಲ್ಲಿ ಕೇಂದ್ರ ಔಷಧ ನಿಯಂತ್ರಕ ಪ್ರಾಧಿಕಾರ ಅನುಮತಿ ನೀಡಿತ್ತು.
ಸದ್ಯ ಬ್ರಿಂಟನ್ ಈ ಮಾತ್ರೆಗಳ ಉತ್ಪಾದನೆ ಪ್ರಮಾಣವನ್ನು 15 ಲಕ್ಷದಿಂದ 50 ಲಕ್ಷಕ್ಕೆ ಹೆಚ್ಚಿಸಲಿದೆ. ಇದರ ಜೊತೆಗೆ ಇತರ ಜೀವರಕ್ಷಕ ಔಷಧಿಗಳ ಉತ್ಪಾದನೆಯನ್ನು ಸಹ ಕಂಪನಿ ಹೆಚ್ಚಿಸಲಿದೆ. ಸದ್ಯ ಮಾರುಕಟ್ಟೆಯಲ್ಲಿ 10 ಫಾವಿಟೋನ್ ಮಾತ್ರೆಗಳ ಬೆಲೆ 790 ರೂಪಾಯಿಗಳಾಗಿದೆ.
"ಕೋವಿಡ್ ಎರಡನೇ ಅಲೆಯೊಂದಿಗೆ ದೇಶ ಹೋರಾಡುತ್ತಿರುವುದು ದುಃಖದ ಸಂಗತಿ. ಕೊನೆಯ ಗ್ರಾಹಕ ಅಥವಾ ರೋಗಿಯು ಈ ಬಿಕ್ಕಟ್ಟಿನಿಂದ ಅತಿ ಹೆಚ್ಚು ಬಾಧಿತನಾಗಿದ್ದು, ಆತ ತನ್ನ ಆರೋಗ್ಯದತ್ತ ಗಮನಹರಿಸಬೇಕಿದೆ. ಈ ಸ್ಥಿತಿಯಲ್ಲಿ ನಾವು ಕೈಲಾದ ಮಟ್ಟಿಗೆ ಸಹಾಯ ಮಾಡಲು ಯತ್ನಿಸುತ್ತಿದ್ದೇವೆ. ಹೀಗಾಗಿ ನಮ್ಮ ಔಷಧ ಉತ್ಪಾದನೆಯನ್ನು ಮೂರು ಪಟ್ಟು ಹೆಚ್ಚಿಸುವ ಮೂಲಕ ಕೊನೆಯ ಗ್ರಾಹಕ ಅಥವಾ ರೋಗಿಗೆ ಈ ಔಷಧಿಯು ಸುಲಭವಾಗಿ ಸಿಗುವಂತೆ ಮಾಡುತ್ತಿದ್ದೇವೆ. ಇದರಿಂದ ಬಹುದೊಡ್ಡ ಸಮುದಾಯಕ್ಕೆ ಸಹಾಯವಾಗಲಿದೆ ಎಂದು ನಿರೀಕ್ಷಿಸುತ್ತೇವೆ." ಎಂದು ಬ್ರಿಂಟನ್ ಫಾರ್ಮಾ ಕಂಪನಿಯ ಸಿಎಂಡಿ ರಾಹುಲ್ ದರ್ದಾ ಹೇಳಿದ್ದಾರೆ.
ಕಂಪನಿಯು ಸ್ಕ್ಯಾಬೊವೇರ್ ಮತ್ತು ಐವರಬಾಂಡ್ (ಐವರಮೆಕ್ಟಿನ್ 12ಎಂಜಿ) ಹಾಗೂ ಡಾಕ್ಸಿಬಾಂಡ್ ಎಲ್ಬಿ ಮತ್ತು ಬ್ರಿಯೊಡಾಕ್ಸ್ (ಡಾಕ್ಸಿಸೈಕ್ಲಿನ್) ಮಾತ್ರೆಗಳ ಉತ್ಪಾದನೆಯನ್ನು ಸಹ ಹೆಚ್ಚಿಸಿದೆ.