ನವದೆಹಲಿ: ಮೀಸಲಾತಿಯ ಮೇಲೆ ಸುಪ್ರೀಂಕೋರ್ಟ್ ವಿಧಿಸಿರುವ ಶೇ.50 ರಷ್ಟು ಮಿತಿಯನ್ನು ತೆಗೆದುಹಾಕಲು ಕಾನೂನು ರೂಪಿಸಬೇಕು ಎಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಇದೇ ವೇಳೆ, ಕೋಟಾ ಮಿತಿಯನ್ನು ಹೆಚ್ಚಿಸಲು ರಾಜ್ಯಗಳಿಗೆ ಅವಕಾಶ ನೀಡಬೇಕು ಎಂದು ಹೇಳಿದ್ದಾರೆ.
ನ್ಯಾಯಾಲಯದ ತೀರ್ಪುಗಳಿಗಿಂತ ಸಂವಿಧಾನವು ದೊಡ್ಡದಾಗಿದೆ. ಕೋಟಾ ಮಿತಿ ಅಥವಾ ಅದರ ಹೆಚ್ಚಳಕ್ಕೆ ಸಂವಿಧಾನದಲ್ಲಿ ಯಾವುದೇ ಅಡ್ಡಿಯಿಲ್ಲ. ಆದ್ದರಿಂದ, ಶೇ.50 ರ ಮಿತಿಯನ್ನು ತೆಗೆದುಹಾಕಲು ಸಂವಿಧಾನಕ್ಕೆ ತಿದ್ದುಪಡಿ ಮಾಡುವಂತೆ ನಾನು ಮೋದಿ ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇನೆ. ಶಿಕ್ಷಣ, ಉದ್ಯೋಗಗಳಲ್ಲಿ ಮೀಸಲಾತಿ ಮಿತಿಯನ್ನು ಹೆಚ್ಚಿಸಲು ರಾಜ್ಯಗಳಿಗೆ ಅನುಮತಿ ನೀಡಬೇಕು ಎಂದು ಪವಾರ್ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಮರಾಠ ಮೀಸಲಾತಿ : ಕೇಂದ್ರ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್!
ಕೇಂದ್ರ ಸರ್ಕಾರವು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶೇ.10 ರಷ್ಟು ಮೀಸಲಾತಿ ನೀಡುವ ಮೂಲಕ ಈಗಾಗಲೇ ಶೇ.50 ರ ಮಿತಿಯನ್ನು ವಿಸ್ತರಿಸಿದೆ ಎಂದು ಪವಾರ್ ನೆನಪಿಸಿಕೊಂಡರು. ಈ ಮಿತಿಯನ್ನು ತೆಗೆದುಹಾಕದ ಹೊರತು ಮರಾಠರಿಗೆ ಮೀಸಲಾತಿಯನ್ನು ಹೆಚ್ಚಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಇದೇ ವೇಳೆ ಜಾತಿ ಆಧಾರದಲ್ಲಿ ಜನಗಣತಿ ನಡೆಸುವಂತೆ ಕೇಂದ್ರ ಸರ್ಕಾರಕ್ಕೆ ಪವಾರ್ ಒತ್ತಾಯಿಸಿದ್ದಾರೆ. ಕಳೆದ ವಾರ ರಾಜ್ಯಸಭೆಯಲ್ಲಿ ನಡೆದ ದುರದೃಷ್ಟಕರ ಘಟನೆಗಳಿಗೆ ಪ್ರತಿಕ್ರಿಯಿಸಿದ ಅವರು, ಸಂಸತ್ತಿನಲ್ಲಿ ಮಾರ್ಷಲ್‌ಗಳ ಬಳಕೆ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಎಂದು ಹೇಳಿದ್ದಾರೆ.