ಮಸ್ಸೂರಿ(ಉತ್ತರಾಖಂಡ) : ಪಂಚತಾರಾ ಹೋಟೆಲ್ನಲ್ಲಿ ನಡೆದ ವಿವಾಹವೊಂದು ದಿಢೀರ್ ಆಗಿ ಕ್ಯಾನ್ಸಲ್ ಆಗಿರುವ ಘಟನೆ ಉತ್ತರಾಖಂಡ್ನಲ್ಲಿ ನಡೆದಿದೆ. ಹುಡುಗನ ವರ್ತನೆಯಿಂದ ಬೇಸತ್ತು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ವಧು ಹೇಳಿಕೊಂಡಿದ್ದಾಳೆ. ನಿನ್ನೆ(ಗುರುವಾರ) ಮಸ್ಸೂರಿಯ ಪಂಚತಾರಾ ಹೋಟೆಲ್ನಲ್ಲಿ ವಿವಾಹ ಸಮಾರಂಭ ಆಯೋಜಿಸಲಾಗಿತ್ತು.
ಎಲ್ಲ ರೀತಿಯ ತಯಾರಿಗಳು ಮುಕ್ತಾಯಗೊಂಡಿದ್ದವು. ಆದರೆ, ಈ ವೇಳೆ ಹುಡುಗನ ವರ್ತನೆಯಿಂದ ಬೇಸತ್ತಿದ್ದ ಹುಡುಗಿ ಆತನೊಂದಿಗೆ ಸಪ್ತಪದಿ ತುಳಿಯಲು ಹಿಂದೇಟು ಹಾಕಿದ್ದಾಳೆ. ಇದರ ಬೆನ್ನಲ್ಲೇ ವಧುವಿನ ಕಡೆಯವರು ಪೊಲೀಸ್ ಪ್ರಕರಣ ದಾಖಲು ಮಾಡಿದ್ದು, ವರನ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಜತೆಗೆ ವರನ ಕಡೆಯವರು ವರದಕ್ಷಿಣೆ ನೀಡುವಂತೆ ಕೇಳಿದ್ದಾರೆಂದು ಆರೋಪ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದ ಈ ಜೋಡಿ ಮದುವೆ ಮಾಡಿಕೊಳ್ಳಲು ನಿರ್ಧರಿಸಿತ್ತು. ಅದರಂತೆ ಪಂಚತಾರಾ ಹೋಟೆಲ್ನಲ್ಲಿ ಮದುವೆ ಆಯೋಜನೆ ಮಾಡಲಾಗಿತ್ತು.
ಇದನ್ನೂ ಓದಿರಿ: ನಡುರಸ್ತೆಯಲ್ಲೇ ಹೊತ್ತಿ ಉರಿದ ಕಾರು.. ಐವರು ಅಪಾಯದಿಂದ ಪಾರು..
ಮದುವೆಯ ಹಿಂದಿನ ರಾತ್ರಿ ವರ ಪಾರ್ಟಿಯಲ್ಲಿ ಭಾಗಿಯಾಗಿದ್ದು, ಇದಾದ ಬಳಿಕ ಆತ ತನ್ನೊಂದಿಗೆ ಅಸಹ್ಯವಾಗಿ ನಡೆದುಕೊಂಡಿದ್ದಾನೆಂದು ಹುಡುಗಿ ಆರೋಪಿಸಿದ್ದಾಳೆ. ಹೀಗಾಗಿ, ಆತನೊಂದಿಗೆ ತಾನು ಮದುವೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾಳೆ. ಹೀಗಾಗಿ, ಮದುವೆ ಮುರಿದು ಬಿದ್ದಿದೆ.
ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಹೋಟೆಲ್ ಮ್ಯಾನೇಜರ್, ಎಲ್ಲ ವ್ಯವಸ್ಥೆ ಪೂರ್ಣಗೊಂಡಿದ್ದವು. ಸಮಾರಂಭದಲ್ಲಿ 40ರಿಂದ 50 ಜನರು ಭಾಗಿಯಾಗಿದ್ದರು. ಎಲ್ಲವೂ ಚೆನ್ನಾಗಿತ್ತು. ಆದರೆ, ರಾತ್ರಿ ವರ ತನ್ನ ರೂಂಗೆ ಹೋಗಿದ್ದನು. ಬೆಳಗ್ಗೆ ಇದ್ದಕ್ಕಿದ್ದಂತೆ ಹುಡುಗಿ ಮದುವೆ ನಿರಾಕರಣೆ ಮಾಡಿದ್ದಾಳೆ. ಹೀಗಾಗಿ, ಇದು ಮುರಿದು ಬಿದ್ದಿದೆ ಎಂದಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.