ನವದೆಹಲಿ: ಪೆಗಾಸಸ್ ಗೂಢಚರ್ಯೆ ಪ್ರಕರಣ ಸಂಬಂಧ ತನಿಖೆಗೆ ಸಮಿತಿ ರಚಿಸುವುದಾಗಿ ಸುಪ್ರೀಂಕೋರ್ಟ್ ಗುರುವಾರ ತಿಳಿಸಿದೆ. ಇದಕ್ಕೂ ಮೊದಲು ಈ ಪ್ರಕರಣ ಸಂಬಂಧ ತನಿಖೆಗೆ ನಿರ್ದೇಶಿಸಬೇಕು ಎಂದು ಆಗ್ರಹಿಸಿ ಸುಪ್ರೀಂಕೋರ್ಟ್ಗೆ ಹತ್ತಾರು ಅರ್ಜಿಗಳು ಸಲ್ಲಿಕೆಯಾಗಿದ್ದವು.
ಪೆಗಾಸಸ್ ಗೂಢಚರ್ಯೆ ಪ್ರಕರಣ ಸಂಬಂಧ ತನಿಖೆಗೆ ಕೋರಿ ಸಲ್ಲಿಕೆಯಾದ ಅರ್ಜಿಗಳ ವಿಚಾರಣೆ ನಡೆಸಿರುವ ಸುಪ್ರೀಂಕೋರ್ಟ್, ಪ್ರಕರಣ ಸಂಬಂಧ ತನಿಖೆಗೆ ಸಮಿತಿ ರಚಿಸುವುದಾಗಿ ಹೇಳಿದೆ.
ಮುಖ್ಯ ನಾಯಮೂರ್ತಿ ಎನ್.ವಿ ರಮಣ ಅವರಿದ್ದ ಪೀಠ ಈ ನಿರ್ಧಾರಕ್ಕೆ ಬಂದಿದ್ದು, ಮುಂದಿನ ವಾರ ಮಧ್ಯಂತರ ಆದೇಶ ಹೊರಡಿಸಲಾಗುವುದು ಎಂದಿದ್ದಾರೆ. ಈ ವಾರವೇ ಸಮಿತಿ ರಚಿಸಲಾಗುತ್ತಿತ್ತು. ಆದರೆ, ಸಮಿತಿಯಲ್ಲಿರಬೇಕಾಗಿದ್ದ ತಜ್ಞರೊಬ್ಬರು ವೈಯಕ್ತಿಕ ಕಾರಣದಿಂದ ಹಿಂದೆ ಸರಿದಿದ್ದು, ವಿಳಂಬವಾಗಲು ಕಾರಣವಾಗಿದೆ. ಮುಂದಿನ ವಾರ ಪೆಗಾಸಸ್ ಕುರಿತ ಆದೇಶ ಹೊರಡಿಸಲಿದ್ದೇವೆ ಎಂದಿದ್ದಾರೆ.
ಇಸ್ರೇಲಿ ಮೂಲದ ಸ್ಪೈವೇರ್‌ನ ಭಾರತೀಯರ ಮೇಲೆ ಅಕ್ರಮವಾಗಿ ಕಣ್ಗಾವಲು ಇರಿಸಿರುವ ಆರೋಪ ಕುರಿತು ತನಿಖೆ ನಡೆಸಬೇಕೆಂದು ಕೋರಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಕೆಯಾಗಿತ್ತು. ದಿ ವೈರ್ ಸುದ್ದಿ ಸಂಸ್ಥೆಯ ಪ್ರಕಾರ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ತೃಣಮೂಲ ಸಂಸದ ಅಭಿಷೇಕ್ ಬ್ಯಾನರ್ಜಿ, ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಮತ್ತು ಕೈಗಾರಿಕೋದ್ಯಮಿ ಅನಿಲ್ ಅಂಬಾನಿ ಸೇರಿದಂತೆ 300ಕ್ಕೂ ಹೆಚ್ಚು ವಿರೋಧ ಪಕ್ಷದ ನಾಯಕರು, ಪತ್ರಕರ್ತರು ಮತ್ತು ಇತರರ ದೂರವಾಣಿ ಸಂಖ್ಯೆಗಳನ್ನು ಸಂಭಾವ್ಯ ಕಣ್ಗಾವಲು ಪಟ್ಟಿಯಲ್ಲಿದೆ ಎಂದು ವರದಿಯಾಗಿತ್ತು.
ಆದರೆ, ಈ ಆರೋಪವನ್ನ ಸರ್ಕಾರ ಬಲವಾಗಿ ನಿರಾಕರಿಸಿತ್ತು. ಜೊತೆಗೆ ತನಿಖೆಗಾಗಿ ಸ್ವತಂತ್ರ ಸಮಿತಿ ರಚಿಸುವ ಮನವಿಯನ್ನ ತಿರಸ್ಕರಿಸಿತ್ತು.
ಇದನ್ನೂ ಓದಿ: ಅಹಮದಾಬಾದ್ಗೆ ಆಗಮಿಸಿದ ಸೋನು ಸೂದ್: AAP ಸೇರ್ಪಡೆಯಾಗ್ತಾರಾ 'ರಿಯಲ್ ಹೀರೋ'?