ನವದೆಹಲಿ: ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಫೆಬ್ರವರಿ 15ರೊಳಗೆ ಉತ್ತರಿಸುವಂತೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರಿಗೆ ಲೋಕಸಭೆಯ ಕಾರ್ಯದರ್ಶಿ ಸೂಚಿಸಿದ್ದಾರೆ. ಪ್ರಧಾನಿ ಮೋದಿ ವಿರುದ್ಧ ತಪ್ಪುದಾರಿಗೆಳೆಯುವ, ಅವಹೇಳನಕಾರಿ, ಅಸಂಸದೀಯ ಹಾಗೂ ದೋಷಾರೋಪಣೆಯ ಹೇಳಿಕೆಗಳ ಕುರಿತು ಫೆಬ್ರವರಿ 10ರಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಮತ್ತು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ವಿಶೇಷ ಹಕ್ಕು ಉಲ್ಲಂಘನೆ ನೋಟಿಸ್ ನೀಡಿದ್ದು, ಇದಕ್ಕೆ ಉತ್ತರವನ್ನು ನೀಡಬೇಕೆಂದು ಕೇಳಿದ್ದಾರೆ ಎಂದು ರಾಹುಲ್ ಗಾಂಧಿಗೆ ಪತ್ರ ಬರೆಯಲಾಗಿದೆ.
ಇದನ್ನೂ ಓದಿ: ಪ್ರಧಾನಿ ವಿರುದ್ಧ ಗಂಭೀರ ಆರೋಪ: ರಾಹುಲ್ ಗಾಂಧಿಗೆ ಬಿಜೆಪಿಯಿಂದ ಹಕ್ಕುಚ್ಯುತಿ ನೋಟಿಸ್
ಫೆಬ್ರವರಿ 7ರಂದು ಲೋಕಸಭೆಯಲ್ಲಿ ಮಾಡಿದ ಭಾಷಣದಲ್ಲಿ ರಾಹುಲ್ ಗಾಂಧಿ, ಹಿಂಡನ್‌ಬರ್ಗ್ ರಿಸರ್ಚ್ ವರದಿ - ಅದಾನಿ ವಿವಾದದ ಬಗ್ಗೆ ಸರ್ಕಾರದ ವಿರುದ್ಧ ಹಲವಾರು ಆರೋಪಗಳನ್ನು ಮಾಡಿದ್ದರು. ಈ ಬಗ್ಗೆ ಆಕ್ಷೇಪ ವ್ಯಕ್ತಡಿಸಿದ್ದ ಬಿಜೆಪಿ ಸಂಸದ ನಿಶಿಕಾಂತ್ ದುಬೆ, ರಾಹುಲ್ ಆಧಾರರಹಿತ, ಪರಿಶೀಲಿಸದೇ ದೋಷಾರೋಪ, ಮಾನನಷ್ಟ ಹೇಳಿಕೆ ನೀಡಿದ್ದಾರೆ. ಅಲ್ಲದೇ, ಕಲಾಪಗಳ ನಿಯಮಾನುಸಾರ ಅವರು ದಾಖಲೆ ನೀಡದೇ ಆರೋಪಿಸಿದ್ದಕ್ಕೆ ರಾಹುಲ್ ಹೇಳಿಕೆ ವಜಾಗೊಳಿಸಬೇಕೆಂದು ಹಕ್ಕುಚ್ಯುತಿ ನೋಟಿಸ್ ಜಾರಿ ಮಾಡಿದ್ದರು.
ಇದನ್ನೂ ಓದಿ: ಮೋದಿ ಭಾಷಣದಿಂದ ತೃಪ್ತಿಯಾಗಿಲ್ಲ, ಅವರು ಅದಾನಿಯನ್ನು ರಕ್ಷಿಸುತ್ತಿದ್ದಾರೆ: ರಾಹುಲ್ ಗಾಂಧಿ
ಅಲ್ಲದೇ, ಪ್ರಧಾನಿ ವಿರುದ್ಧ ರಾಹುಲ್ ಗಾಂಧಿ ಮಾಡಿರುವ ಆರೋಪಗಳಿಗೆ ಸಾಕ್ಷ್ಯಗಳನ್ನು ನೀಡಬೇಕು. ಸಂಸದರಿಗೆ ಹಕ್ಕುಗಳಿದ್ದಂತೆ, ಕರ್ತವ್ಯಗಳಿರುತ್ತವೆ. ಪ್ರಧಾನಿ ವಿರುದ್ಧ ಅವಹೇಳನಕಾರಿ ಮತ್ತು ಮಾನನಷ್ಟ ಹೇಳಿಕೆಗಳನ್ನು ನೀಡಿದ ರಾಹುಲ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿದ್ದರು. ರಾಷ್ಟ್ರಪತಿಗಳ ಭಾಷಣಕ್ಕೆ ಕೃತಜ್ಞತೆ ಸಲ್ಲಿಸುವ ಸಂದರ್ಭದಲ್ಲಿ ಯಾವುದೇ ಮುನ್ಸೂಚನೆ ನೀಡದೆ ಕಾಂಗ್ರೆಸ್ ನಾಯಕ ಗಂಭೀರ ಆರೋಪಗಳನ್ನು ಮಾಡಿದ್ದು ನಿಯಮಬಾಹಿರ ಎಂದು ಬಿಜೆಪಿ ಸಂಸದ ಟೀಕಿಸಿದ್ದರು.
ಮತ್ತೊಂದೆಡೆ, ಸದನದಲ್ಲಿ ಮಾತನಾಡಿದ್ದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಷಿ ಕೂಡ, ಸಂಸತ್ತಿನ ನಿಯಮಗಳ ಪ್ರಕಾರ ಯಾವುದೇ ವ್ಯಕ್ತಿಯ ವಿರುದ್ಧ ಆರೋಪ ಮಾಡುವ ಮೊದಲು ಅವರಿಗೆ ಪೂರ್ವ ಸೂಚನೆ ನೀಡಬೇಕು. ಆದರೆ, ರಾಹುಲ್ ಗಾಂಧಿ ಸದನದಲ್ಲಿ ಇರದ ವ್ಯಕ್ತಿಯ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಇದು ನಿಯಮಬಾಹಿರ. ಆಧಾರ ರಹಿತ ಆರೋಪ ಇದಾಗಿದ್ದು, ಅವರ ವಿರುದ್ಧ ಹಕ್ಕುಚ್ಯುತಿ ಮಂಡಿಸಲಾಗುವುದು ಎಂದು ಹೇಳಿದ್ದರು.
ರಾಹುಲ್ ಆರೋಪವೇನು?: ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ 2014ರಿಂದ 2022ರವರೆಗೆ ಅದಾನಿ ವ್ಯಾಪಾರ ವಾಹಿವಾಟು 8 ಶತಕೋಟಿಯಿಂದ 140 ಶತಕೋಟಿಗೆ ಏರಿಕೆಯಾಗಿದೆ. 2014ರಲ್ಲಿ ಅದಾನಿ ವಿಶ್ವದ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಅದಾನಿ 609ನೇ ಸ್ಥಾನದಲ್ಲಿದ್ದರು. ಈಗ ಎಂಟು ವರ್ಷಗಳ ಅವಧಿಯಲ್ಲಿ ಅವರು ಎರಡನೇ ಶ್ರೀಮಂತ ವ್ಯಕ್ತಿಯ ಪಟ್ಟಕ್ಕೆ ಏರಿದ್ದಾರೆ. ವಿದ್ಯುತ್, ವಿಮಾನ ನಿಲ್ದಾಣ, ರಕ್ಷಣಾ ವಲಯ, ಹಡಗುಗಳ ನಿರ್ವಹಣೆಯವರೆಗೆ ಯಾವಾಗಲೂ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಕೃಪೆಗೆ ಅದಾನಿ ಪಾತ್ರರಾಗಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು.
ಇದನ್ನೂ ಓದಿ: ಇದು ಮೋದಿ-ಅದಾನಿ ಸಂಬಂಧ ಎಂದು ಫೋಟೋ ತೋರಿಸಿದ ರಾಹುಲ್: ಸ್ಪೀಕರ್ ಎಚ್ಚರಿಕೆ ಹೀಗಿತ್ತು!