ನವದೆಹಲಿ: ಯುವಕನೊಬ್ಬ ತನ್ನ ಪ್ರಿಯತಮೆ ಜೊತೆ ಸೇರಿಕೊಂಡು, ಮತ್ತೊಬ್ಬ ಪ್ರಿಯತಮೆಯನ್ನು ಕೊಲೆ ಮಾಡಿರುವ ಘಟನೆ ನೋಯ್ಡಾದಲ್ಲಿ ನಡೆದಿದೆ.
ದಾದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಬಧ್‌ಪುರ ಗ್ರಾಮದ ಪಾಯಲ್ ಮತ್ತು ಅಜಯ್ ಠಾಕೂರ್ ನಡುವೆ ಫೇಸ್‌ಬುಕ್ ಮೂಲಕ ಸ್ನೇಹ ಬೆಳೆದಿತ್ತು. ಬಳಿಕ ಈ ಸ್ನೇಹ ಪ್ರೇಮಕ್ಕೆ ತಿರುಗಿತ್ತು. ಈ ಸಂಬಂಧವನ್ನು ಯುವಕನ ಮತ್ತೊಬ್ಬ ಗೆಳತಿ ಒಪ್ಪುವುದಿಲ್ಲ ಎಂಬುದು ಇಬ್ಬರಿಗೂ ಗೊತ್ತಿತ್ತು. ಹಾಗಾಗಿ ಇಬ್ಬರೂ ಮನೆಯಿಂದ ಓಡಿ ಹೋಗಿದ್ದಾರೆ. ನಂತರ ಪಾಯಲ್ ಮನೆಯವರು ಆಕೆಯನ್ನ ಹುಡುಕುವ ಕೆಲಸ ಮಾಡಿಲ್ಲ.
ಇಷ್ಟೆಲ್ಲ ಆದ ನಂತರ ಬಿಸಾರ್ಖ್ ಪೊಲೀಸ್ ಠಾಣೆ ವ್ಯಾಪ್ತಿಯ ಗೌರ್ ಸಿಟಿ ಮಾಲ್‌ನಲ್ಲಿ ಕೆಲಸ ಮಾಡುವ, ಮತ್ತೊಬ್ಬ ಪ್ರಿಯತಮೆ ಹೇಮಾಳನ್ನು ಕೊಲ್ಲಲು ಅಜಯ್ ಸಂಚು ರೂಪಿಸಿದ್ದಾನೆ. ಯೋಜನೆ ಪ್ರಕಾರ ಹೇಮಾಳನ್ನು ತನ್ನೊಂದಿಗೆ ಕರೆದುಕೊಂಡು ಬಾಧ್‌ಪುರ ಪಾಯಲ್‌ನ ಮನೆಗೆ ತಲುಪಿ, ಅಲ್ಲಿ ಕತ್ತು ಹಿಸುಕಿ ಹೇಮಾಳನ್ನು ಕೊಂದಿದ್ದಾನೆ.
ಪಾಯಲ್ ಮನೆಯಲ್ಲೇ ಕೊಲೆ: ನಂತರ ಪಾಯಲ್‌ನ ಬಟ್ಟೆಯನ್ನು ಆಕೆಗೆ ಹಾಕಿ, ಮುಖವನ್ನು ಬಿಸಿ ಎಣ್ಣೆಯಿಂದ ಸುಟ್ಟಿದ್ದಾನೆ. ಹಾಗಾಗಿ ಯಾರಿಗೂ ಅದು ಹೇಮಾ ಎಂದು ಗುರುತಿಸಲಾಗಲಿಲ್ಲ. ಆದರೆ, ಎಲ್ಲರೂ ಪಾಯಲ್ ಎಂದುಕೊಂಡಿದ್ದಾರೆ. ಮೃತದೇಹದ ಜೊತೆಗೆ ಪಾಯಲ್ ಹೆಸರಿನಲ್ಲಿ ಡೆತ್ನೋಟ್ ಸಹ ದೊರೆತಿತ್ತು. ಇದಾದ ಬಳಿಕ ಇಬ್ಬರೂ ಅಲ್ಲಿಂದ ಪರಾರಿಯಾಗಿದ್ದಾರೆ. ಈ ಮೃತದೇಹವನ್ನು ಪಾಯಲ್ ಮೃತದೇಹ ಎಂದು ಪರಿಗಣಿಸಿ, ಆಕೆಯ ಸಂಬಂಧಿಕರು ಅಂತ್ಯಸಂಸ್ಕಾರ ಮಾಡಿದ್ದಾರೆ.
ಹೇಮಾ ಕುಟುಂಬಸ್ಥರಿಂದ ಪೊಲೀಸರಿಗೆ ದೂರು: ಇನ್ನು ಇತ್ತ ಹೇಮಾ ಕುಟುಂಬಸ್ಥರು ಆಕೆ ಕಾಣುತ್ತಿಲ್ಲ ಎಂದು ದೂರು ನೀಡಿದ್ದಾರೆ. ಹೇಮಾ ಮೂಲತಃ ಮಥುರಾ ಮೂಲದವಳಾಗಿದ್ದು, ಪ್ರಸ್ತುತ ಸೂರಜ್‌ಪುರದಲ್ಲಿ ಕುಟುಂಬದೊಂದಿಗೆ ವಾಸಿಸುತ್ತಿದ್ದಳು. ಹೇಮಾ ಮನೆಗೆ ಬಾರದೇ ಇದ್ದಾಗ ಆಕೆಯ ಸಂಬಂಧಿಕರು ಬಿಸ್ರಖ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ.
ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. 20 ದಿನಗಳ ಹಿಂದೆ ದಾದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಬಧ್‌ಪುರ ಗ್ರಾಮದಲ್ಲಿ ಹೇಮಾಳನ್ನು ಪಾಯಲ್ ಮತ್ತು ಅಜಯ್ ಠಾಕೂರ್ ಸೇರಿ ಕೊಲೆ ಮಾಡಿದ್ದಾರೆ ಎಂದು ಬಿಸ್ರಾಖ್ ಪೊಲೀಸರು ತನಿಖೆಯಲ್ಲಿ ಕಂಡುಕೊಂಡಿದ್ದಾರೆ. ಬಳಿಕ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಹೈದರಾಬಾದ್ ರೇಪ್ ಕೇಸ್: ಅಶ್ಲೀಲ ಚಿತ್ರ ನೋಡಿ ಬಾಲಕಿ ರೇಪ್ ಮಾಡಿದ ಆರೋಪಿಗಳು
ಪಾಯಲ್ ದಾದ್ರಿ ಪೊಲೀಸ್ ಠಾಣೆ ವ್ಯಾಪ್ತಿಯ ಬದ್ಪುರ ಗ್ರಾಮದ ನಿವಾಸಿಯಾಗಿದ್ದು, ಅವರ ತಂದೆ ರವೀಂದ್ರ ಮತ್ತು ಅವರ ತಾಯಿ ಒಂದು ವರ್ಷದ ಹಿಂದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಪಾಯಲ್ ತನ್ನ ಇಬ್ಬರು ಸಹೋದರರೊಂದಿಗೆ ಗ್ರಾಮದಲ್ಲಿ ವಾಸಿಸುತ್ತಿದ್ದಳು. ಪಾಯಲ್ ತನ್ನ ಇಬ್ಬರು ಸಹೋದರರ ಆಹಾರದಲ್ಲಿ ಏನನ್ನೋ ಸೇರಿಸಿ ಪ್ರಜ್ಞೆ ತಪ್ಪಿಸುತ್ತಿದ್ದಳು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಆ ನಂತರ ಅಜಯ್ ಠಾಕೂರ್ನನ್ನು ಮನೆಗೆ ಕರೆಸಿ ಭೇಟಿಯಾಗುತ್ತಿದ್ದಳು ಎಂದು ಹೇಳಲಾಗುತ್ತಿದೆ.
ಇಬ್ಬರ ಪ್ರೇಮ ಹಲವು ವರ್ಷಗಳಿಂದ ನಡೆಯುತ್ತಿತ್ತು. ಸದ್ಯ ಬಿಸ್ರಖ್ ಪೊಲೀಸರು ಪಾಯಲ್, ಆಕೆಯ ಪ್ರಿಯಕರ ಅಜಯ್ ಠಾಕೂರ್ ಸೇರಿದಂತೆ ಹಲವರನ್ನು ವಶಕ್ಕೆ ಪಡೆದಿದ್ದು, ಸ್ಥಳಕ್ಕೆ ತೆರಳಿ ತನಿಖೆ ನಡೆಸುತ್ತಿದ್ದಾರೆ. ಈ ವಿಚಾರವನ್ನು ಪೊಲೀಸರು ಶೀಘ್ರದಲ್ಲೇ ಬಹಿರಂಗಪಡಿಸುವ ಸಾಧ್ಯತೆ ಇದೆ.