ಹೈದರಾಬಾದ್: ಕೆಲ ದಿನಗಳ ಹಿಂದಷ್ಟೇ ಭಾರತ್ ರಾಷ್ಟ್ರ ಸಮಿತಿಯಾಗಿ(ಬಿಆರ್ಎಸ್) ರೂಪಾಂತರಗೊಂಡಿದ್ದ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್ಎಸ್)ಯ ಮಾಜಿ ಸಂಸದ ಬೂರ ನರಸಯ್ಯಗೌಡ ಅವರು ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಉಪ ಚುನಾವಣೆಯ ಹೊಸ್ತಿಲಲ್ಲೇ ನಾಯಕರೊಬ್ಬರು ಪಕ್ಷದಿಂದ ಹಿಂದಡಿ ಇಟ್ಟಿದ್ದಾರೆ.
ಈ ಬಗ್ಗೆ ಮುಖ್ಯಮಂತ್ರಿ ಕೆ.ಚಂದ್ರಶೇಖರ್ರಾವ್ ಅವರಿಗೆ ರಾಜೀನಾಮೆ ಪತ್ರ ರವಾನಿಸಿದ್ದು, ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ. ಬೂರ ನರಸಯ್ಯಗೌಡರು 2014 ರ ಲೋಕಸಭೆ ಚುನಾವಣೆಯಲ್ಲಿ ತೆಲಂಗಾಣದ ಭುವನಗಿರಿ ಕ್ಷೇತ್ರದಿಂದ ಟಿಆರ್ಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.
ಬಳಿಕ 2019 ರಲ್ಲಿ ಮತ್ತೆ ಅದೇ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು ಕಾಂಗ್ರೆಸ್ ಅಭ್ಯರ್ಥಿ ಕೋಮಟಿರೆಡ್ಡಿ ವೆಂಕಟ್ ರೆಡ್ಡಿ ವಿರುದ್ಧ ಪರಾಭವ ಹೊಂದಿದ್ದರು. ಮುಂದೆ ನಡೆಯಲಿರುವ ಮುನುಗೋಡು ವಿಧಾನಸಭೆ ಉಪಚುನಾವಣೆಗೆ ಬೂರ ನರಸಯ್ಯಗೌಡರು ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಪಕ್ಷದ ನಾಯಕರು ಕೂಸುಕುಂಟ್ಲ ಪ್ರಭಾಕರ ರೆಡ್ಡಿ ಅವರನ್ನು ಅಭ್ಯರ್ಥಿ ಎಂದು ಘೋಷಿಸಿದ್ದು, ನರಸಯ್ಯಗೌಡರ ಅಸಮಾಧಾನಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಅವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಬಿಜೆಪಿ ಪಾಳಯಕ್ಕೆ ನರಸಯ್ಯಗೌಡ: ಸಿಎಂ ಕೆಸಿಆರ್ರಿಂದ ದೂರವಾಗಿರುವ ಬೂರ ನರಸಯ್ಯಗೌಡ ಅವರು ಬಿಜೆಪಿ ಸೇರುವುದು ದಟ್ಟವಾಗಿದೆ. 2 ದಿನಗಳ ಹಿಂದಷ್ಟೇ ಅವರ ಕೆಲವು ಅನುಯಾಯಿಗಳೊಂದಿಗೆ ದೆಹಲಿಗೆ ತೆರಳಿ ಬಿಜೆಪಿ ರಾಜ್ಯಾಧ್ಯಕ್ಷ ಸಂಜಯ್ ಮತ್ತು ಪಕ್ಷದ ಉಸ್ತುವಾರಿ ತರುಣ್ಛುಗತ್ ಅವರನ್ನು ಭೇಟಿಯಾಗಿದ್ದಾರೆ ಎಂದು ವರದಿಯಾಗಿದೆ.
ಬಳಿಕ ನಿನ್ನೆ (ಶುಕ್ರವಾರ) ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿ ಪಕ್ಷ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಈ ಬಗ್ಗೆ ಬಿಜೆಪಿ ರಾಜ್ಯ ಉಸ್ತುವಾರಿ ತರುಣ್ಛುಗತ್ ಈನಾಡು ಜೊತೆ ಮಾತನಾಡಿದ್ದು, ನಮ್ಮದು ರಾಷ್ಟ್ರೀಯ ಪಕ್ಷ. ಯಾರು ಬೇಕಾದರೂ ಸೇರ್ಪಡೆಯಾಗಬಹುದು ಎಂದು ಹೇಳಿದ್ದಾರೆ.
ಓದಿ: ರಾಷ್ಟ್ರ ರಾಜಕಾರಣಕ್ಕೆ ಕೆಸಿಆರ್: ದೆಹಲಿಯಲ್ಲಿ ಭಾರತ್ ರಾಷ್ಟ್ರ ಸಮಿತಿ ಕಚೇರಿ ಆರಂಭಕ್ಕೆ ವೇಗ