ಮುಂಬೈ (ಮಹಾರಾಷ್ಟ್ರ): ಜೆಟ್ ವಿಮಾನಯಾನ ಸಂಸ್ಥೆಯ ಸಂಸ್ಥಾಪಕ ನರೇಶ್ ಗೋಯಲ್ ಮತ್ತು ಅವರ ಪತ್ನಿ ಅನಿತಾ ಗೋಯಲ್ ಅವರಿಗೆ ಬಾಂಬೆ ಹೈಕೋರ್ಟ್ ಇಂದು ಬಿಗ್ ರಿಲೀಫ್ ನೀಡಿದೆ. ಅಕ್ರಮ ಹಣ ವರ್ಗಾವಣೆ ಆರೋಪ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ನಡೆಸುತ್ತಿರುವ ತನಿಖೆಯನ್ನು ನ್ಯಾಯಾಲಯ ರದ್ದುಗೊಳಿಸಿತು.
ನ್ಯಾಯಮೂರ್ತಿ ರೇವತಿ ಮೋಹಿತೆ ಡೆರೆ ಮತ್ತು ನ್ಯಾ.ಪಿ.ಕೆ.ಚವ್ಹಾಣ್ ಅವರಿದ್ದ ವಿಭಾಗೀಯ ಪೀಠವು 2020ರ ಫೆಬ್ರವರಿ 20ರಂದು ಇಡಿ ಸಲ್ಲಿಸಿದ್ದ ಪ್ರಕರಣದ ಮಾಹಿತಿ ವರದಿ (Enforcement Case Information Report - ECIR)ಯನ್ನು ವಜಾ ಮಾಡಿದೆ. ಈ ಮೂಲಕ ಪ್ರಕರಣವನ್ನು ಕಾನೂನು ಬಾಹಿರ ಎಂದು ಪರಿಗಣಿಸಿತು.
ಏನಿದು ಪ್ರಕರಣ?: 2018ರ ಅಕ್ಟೋಬರ್ನಲ್ಲಿ ಜೆಟ್ ಏರ್‌ವೇಸ್ ತನ್ನ ವಿಮಾನ ಕಾರ್ಯಾಚರಣೆಯನ್ನು ರದ್ದುಗೊಳಿಸಿದ ನಂತರ 46 ಕೋಟಿ ರೂಪಾಯಿಗಳಷ್ಟು ನಷ್ಟ ಅನುಭವಿಸಿದೆ ಎಂದು ಅಕ್ಬರ್ ಟ್ರಾವೆಲ್ಸ್ ಎಂಬ ಸಂಸ್ಥೆ ಆರೋಪಿಸಿತ್ತು. ಜೆಟ್ ಏರ್‌ವೇಸ್ ವಿರುದ್ಧ ಅಕ್ಬರ್ ಟ್ರಾವೆಲ್ಸ್ ಆಫ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಮುಖ್ಯ ಹಣಕಾಸು ಅಧಿಕಾರಿ ರಾಜೇಂದ್ರನ್ ನೆರುಪರಂಬಿಲ್ ದೂರು ದಾಖಲಿಸಿದ್ದಾರೆ. ಈ ದೂರಿನ ಮೇರೆಗೆ ಮುಂಬೈ ಪೊಲೀಸರು ನರೇಶ್ ಗೋಯಲ್ ಮತ್ತು ಅನಿತಾ ಗೋಯಲ್ ವಿರುದ್ಧ ವಂಚನೆ, ಕ್ರಿಮಿನಲ್ ಪಿತೂರಿ ಹಾಗೂ ಪೋರ್ಜರಿ ಆರೋಪದಡಿ ಪ್ರಕರಣ ದಾಖಲಿಸಿದ್ದರು.
ಆದರೆ, ನಂತರದಲ್ಲಿ ಪೊಲೀಸರು 2020ರ ಮಾರ್ಚ್ನಲ್ಲಿ ಈ ಪ್ರಕರಣದ ಮುಕ್ತಾಯ ವರದಿಯನ್ನು ಸಲ್ಲಿಸಿದ್ದರು. ಈ ಕ್ರಿಮಿನಲ್ ದೂರಿನಲ್ಲಿ ಯಾವುದೇ ಅಂಶ ಕಂಡುಬಂದಿಲ್ಲ ಎಂದು ಮುಂಬೈ ಪೊಲೀಸರು ತಮ್ಮ ಅಂತಿಮ ವರದಿಯಲ್ಲಿ ತಿಳಿಸಿದ್ದರು. ಇದರಿಂದ ಗೋಯಲ್ ದಂಪತಿ ನಿಟ್ಟುಸಿರು ಬಿಟ್ಟಿದ್ದರು. ಅಲ್ಲದೇ, ಈ ವರದಿಯನ್ನು ನಂತರ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಸಹ ಎತ್ತಿ ಹಿಡಿದಿತ್ತು.
ಮತ್ತೊಂದೆಡೆ, ನ್ಯಾಯಾಲಯದ ಈ ಆದೇಶದ ಬಗ್ಗೆ ಜಾರಿ ನಿರ್ದೇಶನಾಲಯದ ಆಕ್ಷೇಪ ವ್ಯಕ್ತಪಡಿಸಿತ್ತು. ಇದರ ನಡುವೆಯೇ ಇಸಿಐಆರ್ ವರದಿಯನ್ನೂ ರದ್ದುಗೊಳಿಸುವಂತೆ ನರೇಶ್ ಗೋಯಲ್ ಮತ್ತವರ ಪತ್ನಿ ಅನಿತಾ ಗೋಯಲ್ ಹೈಕೋರ್ಟ್ ಮೊರೆ ಹೋಗಿದ್ದರು. ಇದೀಗ ಈ ಅರ್ಜಿ ವಿಚಾರಣೆ ನಡೆಸಿದ ವಿಭಾಗೀಯ ಪೀಠವು ಪ್ರಕರಣ ರದ್ದುಗೊಳಿಸಿದೆ.
ಇದನ್ನೂ ಓದಿ: ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ವಂಚನೆ ಪ್ರಕರಣ: ಇಡಿ ಅಧಿಕಾರಿಗಳಿಂದ ರಾಜೇಶ್ ಬಂಧನ