ಲಖನೌ: ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ಬ್ಲಾಕ್ ಡೆವಲಪ್‌ಮೆಂಟ್ ಕೌನ್ಸಿಲ್(ಬಿಡಿಸಿ) ಚುನಾವಣೆಯಲ್ಲಿ ಗೆದ್ದ ಮಹಿಳಾ ಸದಸ್ಯೆಯೊರ್ವರು ಆಕೆಯ ಪತಿ ಕಸ ಗುಡಿಸುವ ಕೆಲಸ ಮಾಡುತ್ತಿರುವ ಬ್ಲಾಕ್‌ನಲ್ಲೇ ಅಧ್ಯಕ್ಷಗಾದಿ ಪಡೆದಿದ್ದಾರೆ.
ಸುನೀಲ್ ಕುಮಾರ್ ಬ್ಲಾಕ್ ಡೆವಲಪ್‌ಮೆಂಟ್ ಕೌನ್ಸಿಲ್ ಕಚೇರಿಯಲ್ಲಿ ಕಸ ಗುಡಿಸುವ ಕೆಲಸ ಮಾಡುತ್ತಿರುವ ವ್ಯಕ್ತಿ. ಈತನ ತನ್ನ ಪತ್ನಿ ಸೋನಿಯಾ ಒಂದು ದಿನ ಇದೇ ಬ್ಲಾಕ್‌ನ ಅಧ್ಯಕ್ಷರಾಗ್ತಾರೆ ಅಂತ ಎಂದೂ ಭಾವಿಸಿರಲಿಲ್ಲವಂತೆ.
ಈ ತಿಂಗಳ ಆರಂಭದಲ್ಲಿ ನಡೆದ ಬ್ಲಾಕ್ ಅಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ಸದಸ್ಯರಾಗಿದ್ದ ಸೋನಿಯಾ ಬ್ಲಾಕ್ ಅಧ್ಯಕ್ಷೆರಾಗಿದ್ದಾರೆ. ಉತ್ತರ ಪ್ರದೇಶದ ಸಹರಾನ್‌ಪುರದ ಬಾಲಿಯಖೇರಿ ಬ್ಲಾಕ್‌ನ ಮುಖ್ಯಸ್ಥರಾಗಿ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.
ನಲ್ಹೆರಾ ಗುಜ್ಜರ್ ಗ್ರಾಮದ ನಿವಾಸಿ ಸುನಿಲ್, ಬಾಲಿಯಖೇರಿ ಬ್ಲಾಕ್‌ನಲ್ಲಿ ಕಸ ಗುಡಿಸುವ ಕೆಲಸ ಮಾಡುತ್ತಿದ್ದಾರೆ. ಅವರು ತಮ್ಮ ಪತ್ನಿ ಸೋನಿಯಾ ಅವರನ್ನು 55 ನೇ ವಾರ್ಡ್‌ನಿಂದ ಬಿಡಿಸಿ ಚುನಾವಣೆಗೆ ಸ್ಪರ್ಧಿಸಿದರು. ಬಿಜೆಪಿ ಮುಖಂಡ ಮತ್ತು ಜಿಲ್ಲಾ ಪಂಚಾಯತ್ ಸದಸ್ಯ ಮುಖೇಶ್ ಚೌಧರಿ, 26 ವರ್ಷದ ವಿದ್ಯಾವಂತ ಸೋನಿಯಾ ಅವರನ್ನು ಈ ಹುದ್ದೆಗೆ ಅಭ್ಯರ್ಥಿಯನ್ನಾಗಿ ಮಾಡಿದರು.
ಪತಿ ಮತ್ತು ಅವರ ಕುಟುಂಬದವರು ಈ ಹಾದಿಯಲ್ಲಿ ತಮ್ಮನ್ನು ಬೆಂಬಲಿಸಿದ್ದಾರೆ ಎಂದು ಸೋನಿಯಾ ತಿಳಿಸಿದ್ದಾರೆ. ಸುನಿಲ್ ತಮ್ಮ ಕೆಲಸವನ್ನು ಮುಂದುವರಿಸಲು ನಿರ್ಧರಿಸಿದ್ದಾರೆ. ಪತಿ ಸುನಿಲ್ ಗಳಿಸಿದ ಸಂಬಳದಿಂದ ತನ್ನ ಮನೆ ಇನ್ನೂ ನಡೆಯುತ್ತಿದೆ ಎಂದು ಸೋನಿಯಾ ವಿವರಿಸಿದರು.