ಹೈದರಾಬಾದ್ (ತೆಲಂಗಾಣ): ಭಾರತೀಯ ಜನತಾ ಪಕ್ಷ(ಬಿಜೆಪಿ) ಮೇಲೆ ತೆಲಂಗಾಣದ ಜನತೆಯ ವಿಶ್ವಾಸ ಹೆಚ್ಚಾಗಿದೆ. ತೆಲಂಗಾಣದಲ್ಲೂ ಬಿಜೆಪಿಯ ಡಬಲ್ ಇಂಜಿನ್ ಸರ್ಕಾರ ಬರಬೇಕೆಂದು ಜನರು ಆಶಿಸುತ್ತಿದ್ದಾರೆ. ಜನರ ನಿರೀಕ್ಷೆಯಂತೆ ಡಬಲ್ ಇಂಜಿನ್ ಸರ್ಕಾರ ಬಂದೇ ಬರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.
ಹೈದರಾಬಾದ್ನ ಪರೇಡ್ ಮೈದಾನದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಭಾಷಣ ಮಾಡಿದ ಅವರು, ತೆಲಂಗಾಣ ಜನರ ಆಶೀರ್ವಾದಕ್ಕಾಗಿ ಬಂದಿದ್ದೇನೆ. ತೆಲಂಗಾಣ ಅಭಿವೃದ್ಧಿ ನಮ್ಮ ಪಕ್ಷದ ಆದ್ಯತೆ ಆಗಿದೆ. ಡಬಲ್ ಇಂಜಿನ್ ಸರ್ಕಾರ ಬಂದರೆ ತೆಲಂಗಾಣದಲ್ಲಿ ಕ್ಷಿಪ್ರ ಅಭಿವೃದ್ಧಿ ಆಗುತ್ತದೆ. ಪ್ರತಿ ಪಟ್ಟಣ ಮತ್ತು ಗ್ರಾಮ ಕೂಡ ಡಬಲ್ ಎಂಜಿನ್ ಸರ್ಕಾರದಿಂದ ಅಭಿವೃದ್ಧಿ ಹೊಂದುತ್ತವೆ ಎಂದು ತಿಳಿಸಿದರು.
ಇದನ್ನೂ ಓದಿ: ಕರ್ನಾಟಕ ಚುನಾವಣೆಗೆ ಬಿಜೆಪಿ ರಣತಂತ್ರ: ಮುಂದಿನ ಗುರಿ ತೆಲಂಗಾಣ, ಪಶ್ಚಿಮ ಬಂಗಾಳ ಎಂದ ಅಮಿತ್ ಶಾ
ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮಾತೃಭಾಷೆಗೆ ಆದ್ಯತೆ ನೀಡಲಾಗಿದೆ. ತಾಂತ್ರಿಕ ಮತ್ತು ವೈದ್ಯಕೀಯ ಶಿಕ್ಷಣ ತೆಲುಗಿನಲ್ಲಿ ಲಭ್ಯವಾದರೆ ಬಡವರ ಕನಸು ನನಸಾಗುತ್ತದೆ. ತೆಲಂಗಾಣದ ಪ್ರತಿ ಗ್ರಾಮಕ್ಕೂ ನಾವು ರಸ್ತೆಗಳ ಸಂಪರ್ಕ ಕಲ್ಪಿಸುತ್ತಿದ್ದೇವೆ. ಮಹಿಳಾ ಶಕ್ತಿಯನ್ನು ರಾಷ್ಟ್ರೀಯ ಶಕ್ತಿಯನ್ನಾಗಿ ಪರಿವರ್ತಿಸುವ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ. ತೆಲಂಗಾಣದಲ್ಲಿ 35 ಸಾವಿರ ಕೋಟಿ ರೂ. ವೆಚ್ಚದಲ್ಲಿ 5 ಬೃಹತ್ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದೇವೆ. ಮೆಗಾ ಜವಳಿ ಪಾರ್ಕ್ ನಿರ್ಮಿಸುತ್ತೇವೆ ಎಂದು ಭರವಸೆ ನೀಡಿದರು.
ತೆಲುಗಿನಲ್ಲಿ ಭಾಷಣ ಶುರು: ಪ್ರಧಾನಿ ಮೋದಿ ತೆಲುಗಿನಲ್ಲಿ ಮಾತನಾಡುವ ಮೂಲಕ ತಮ್ಮ ಭಾಷಣ ಶುರು ಮಾಡಿದರು. ಪ್ರಾಚೀನ ಸಂಸ್ಕೃತಿ ಮತ್ತು ಪರಾಕ್ರಮಕ್ಕೆ ತೆಲಂಗಾಣ ಪುಣ್ಯಸ್ಥಳ ಎಂದು ಹೇಳಿದರು. ಅಲ್ಲದೇ, ಬಿಜೆಪಿ ಮೇಲಿನ ಇಲ್ಲಿನ ಜನರ ಪ್ರೀತಿಯನ್ನು ಗಮನದಲ್ಲಿಟ್ಟುಕೊಂಡು ಹೈದರಾಬಾದ್‌ನಲ್ಲಿ ನಮ್ಮ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಸಿದ್ದೇವೆ ಎಂದು ಪ್ರಧಾನಿ ತಿಳಿಸಿದರು.
ಇದನ್ನೂ ಓದಿ: ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ: ಖಾದ್ಯಗಳನ್ನು ಖುದ್ದಾಗಿ ಪರಿಶೀಲಿಸಿ ರುಚಿ ಸವಿದ ಪ್ರಧಾನಿ