ನಾಸಿಕ್: ಮಹಾರಾಷ್ಟ್ರದಲ್ಲಿ ಬಿಜೆಪಿ, ಶಿವಸೇನೆ ನಡುವಿನ ಆರೋಪ-ಪ್ರತ್ಯಾರೋಪ, ವಾಕ್ಸಮರ ತಾರಕಕ್ಕೇರಿದ್ದು, ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಬಿಜೆಪಿ ನಾಯಕರು ನಾಸಿಕ್ ಸೈಬರ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಶಿವಸೇನೆ ಮುಖವಾಣಿ ಸಾಮ್ನಾ ಪತ್ರಿಕೆಯ ಸಂಪಾದಕಿ, ಸಿಎಂ ಉದ್ಧವ್ ಠಾಕ್ರೆ ಪತ್ನಿ ರಶ್ಮಿ ಠಾಕ್ರೆ ಹಾಗೂ ಯುವ ಸೇನಾ ಅಧ್ಯಕ್ಷ ವರುಣ್ ಸರ್ದೇಸಾಯಿ ವಿರುದ್ಧವೂ ಬಿಜೆಪಿ ಪೊಲೀಸರಿಗೆ ದೂರು ಸಲ್ಲಿಸಿದೆ. ಈ ಬಗ್ಗೆ ಪೊಲೀಸರು ಕೂಡ ಸ್ಪಷ್ಟಪಡಿಸಿದ್ದಾರೆ.
ಕೇಂದ್ರ ಸಚಿವ ನಾರಾಯಣ್ ರಾಣೆ ಅವರನ್ನು ಬಂಧಿಸಿದ್ದ ನಾಸಿಕ್ ಜಿಲ್ಲೆಯ ಸೈಬರ್ ಪೊಲೀಸ್ ಠಾಣೆಯಲ್ಲೇ ಸಿಎಂ ವಿರುದ್ಧ ದೂರು ನೀಡಿರುವುದು ವಿಶೇಷ. ರಿಷಿಕೇಶ್ ಜಯಂತ್ ಅಹೇರ್ ಎಂಬುವವರು ಸಿಎಂ ವಿರುದ್ಧ ಮೊದಲ ದೂರು ದಾಖಲಿಸಿದ್ದಾರೆ.
ರಾಣೆ ಅವರನ್ನು ಬಂಧಿಸಿದ್ದು ಜನರಿಗೆ ತಪ್ಪು ಸಂದೇಶವನ್ನು ರವಾನಿಸಿದ್ದಂತಾಗಿದೆ. ಜೊತೆಗೆ ಕಾನೂನು ಸುವ್ಯವಸ್ಥೆಗೂ ಧಕ್ಕೆ ಉಂಟಾಗಿದೆ ಎಂದು ಅಹೇರ್ ಹೇಳಿದ್ದಾರೆ. ಸರ್ದೇಸಾಯಿ ಕಾರ್ಯಕ್ರಮವೊಂದಲ್ಲಿ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದರು ಎಂದು ಆರೋಪಿಸಿದ್ದಾರೆ. ಅದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿದೆ ಎಂದು ಐಪಿಸಿ ಸೆಕ್ಷನ್ 153 (A), 107, 212 ಮತ್ತು ಸೈಬರ್ ಅಪರಾಧ ಕಾನೂನುಗಳ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು ಎಂದು ರಿಷಿಕೇಶ್ ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಕೇಂದ್ರ ಸಚಿವ ರಾಣೆ ಹೇಳಿಕೆಗೆ 'ಮಹಾ' ಕೋಲಾಹಲ: ಶಿವಸೇನೆ-ಬಿಜೆಪಿ ನಡುವೆ ಘರ್ಷಣೆ
ಸಿಎಂ ಉದ್ಧವ್ ಠಾಕ್ರೆ ಅವರ ಕಪಾಳಕ್ಕೆ ಬಾರಿಸಬೇಕು ಎಂದು ಹೇಳಿಕೆ ನೀಡಿದ್ದ ಆರೋಪದಲ್ಲಿ ಕೇಂದ್ರ ಸಚಿವ ನಾರಾಯಣ್ ರಾಣೆ ಅವರನ್ನು ನಾಸಿಕ್ ಪೊಲೀಸರು ಮಂಗಳವಾರ ಬಂಧಿಸಿದ್ದರು. ಅಂದು ಸಂಜೆಯೇ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.