ಲಖನೌ (ಉತ್ತರ ಪ್ರದೇಶ): 2024ರ ಲೋಕಸಭೆ ಚುನಾವಣೆಗೆ ಆಡಳಿತಾರೂಢ ಬಿಜೆಪಿ ಸಜ್ಜಾಗುತ್ತಿದೆ. ದೇಶದಲ್ಲಿ ಅತಿ ಹೆಚ್ಚು ಸಂಸತ್ ಸ್ಥಾನಗಳನ್ನು ಹೊಂದಿರುವ ಉತ್ತರ ಪ್ರದೇಶದಲ್ಲಿ ತನ್ನ ಹಿಡಿತ ಮುಂದುವರೆಸುವ ಕಸರತ್ತನ್ನು ಕೇಸರಿ ಪಡೆ ಈಗಿನಿಂದಲೇ ಶುರು ಮಾಡಿದೆ. ಕಳೆದ ಚುನಾವಣೆಯಲ್ಲಿ ಸೋತ ಕ್ಷೇತ್ರಗಳ ಮೇಲೆ ಆಡಳಿತಾರೂಢ ಪಕ್ಷ ತನ್ನ ದೃಷ್ಟಿ ನೆಟ್ಟಿದ್ದು, ಆಯಾ ಕ್ಷೇತ್ರಗಳಲ್ಲಿ ಭರ್ಜರಿ ಪ್ರಚಾರ ನಡೆಸಲು ಸಿದ್ಧತೆ ನಡೆಸುತ್ತಿದೆ.
ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ 2019ರ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದ 80 ಲೋಕಸಭೆ ಕ್ಷೇತ್ರಗಳ ಪೈಕಿ ಒಟ್ಟು 64 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಆದಾಗ್ಯೂ, 16 ಕ್ಷೇತ್ರಗಳಲ್ಲಿ ಪರಾಭವಗೊಂಡಿತ್ತು. ಆದರೆ, ನಂತರದ ಉಪ ಚುನಾವಣೆಗಳಲ್ಲಿ ಕೇಸರಿ ಪಕ್ಷವು ಅಜಂಗಢ ಮತ್ತು ರಾಂಪುರ ಕ್ಷೇತ್ರಗಳನ್ನು ಗೆದ್ದುಕೊಂಡಿತು. ಇದರಿಂದ ಸದ್ಯ 66 ಕ್ಷೇತ್ರಗಳಲ್ಲಿ ಬಿಜೆಪಿ ಸಂಸದರಿದ್ದಾರೆ. ಮತ್ತೊಂದೆಡೆ, 14 ಕ್ಷೇತ್ರಗಳಲ್ಲಿ ಬಿಜೆಪಿಯೇತರ ಲೋಕಸಭಾ ಸದಸ್ಯರಿದ್ದಾರೆ. ಇದರಲ್ಲಿ ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಪ್ರಮುಖರು. ಬಿಜೆಪಿ ಹೊರತಾದ ಸಂಸದರ ರಿಪೋರ್ಟ್ ಕಾರ್ಡ್ ಸಾರ್ವಜನಿಕರ ಮುಂದಿಡುವ ತಂತ್ರವನ್ನು ಕಮಲ ಪಾಳಯ ರೂಪಿಸುತ್ತಿದೆ.
ರಾಯ್ ಬರೇಲಿಯಿಂದಲೇ ಬಿಜೆಪಿ ಅಭಿಯಾನ: ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶ ಅತ್ಯಂತ ನಿರ್ಣಾಯಕ ಪಾತ್ರ ವಹಿಸುತ್ತಿದೆ. ಕೇಂದ್ರದಲ್ಲಿ ಅಧಿಕಾರಕ್ಕೆ ಬರಬೇಕಾದರೆ ಸಾಧ್ಯವಾದಷ್ಟು ಸದಸ್ಯರನ್ನು ಆಯ್ಕೆ ಮಾಡಿಕೊಳ್ಳುವುದು ಯಾವುದೇ ರಾಜಕೀಯ ಪಕ್ಷಕ್ಕೆ ಅತ್ಯಗತ್ಯ ಹಾಗೂ ಅನಿರ್ವಾಯವೂ ಹೌದು. ಆದರೆ, ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸೋನಿಯಾ ಗಾಂಧಿ ಮಾತ್ರ ಗೆದ್ದಿದ್ದಾರೆ. ಲೋಕಸಭೆಯಲ್ಲಿ ರಾಯ್ ಬರೇಲಿ ಕ್ಷೇತ್ರವನ್ನು ಇವರು ಪ್ರತಿನಿಧಿಸುತ್ತಿದ್ದಾರೆ. ಅಮೇಠಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಪಕ್ಷದ ನಾಯಕ ರಾಹುಲ್ ಗಾಂಧಿ, ಬಿಜೆಪಿಯ ಸ್ಮೃತಿ ಇರಾನಿ ವಿರುದ್ಧ ಸೋಲು ಕಂಡಿದ್ದರು. ಹೀಗಾಗಿ 80 ಕ್ಷೇತ್ರಗಳ ಹೊಂದಿರುವ ಯುಪಿಯನ್ನು ಕಾಂಗ್ರೆಸ್ನಿಂದ ಸೋನಿಯಾ ಮಾತ್ರ ಪ್ರತಿನಿಧಿಸುವಂತಾಗಿದೆ.
ಇದೀಗ ಮುಂಬರುವ ಲೋಕಸಭೆ ಚುನಾವಣೆಗೆ ಸೋನಿಯಾ ಗಾಂಧಿ ಅವರನ್ನೂ ಬಿಜೆಪಿ ಗುರಿಯಾಗಿಸಿಕೊಂಡಂತಿದೆ. ಹೀಗಾಗಿ ರಾಯ್ ಬರೇಲಿ ಕ್ಷೇತ್ರದಿಂದ ಬಿಜೆಪಿ ತನ್ನ ಅಭಿಯಾನವನ್ನು ಆರಂಭಿಸಿದೆ. ಸಂಸದರ ರಿಪೋರ್ಟ್ ಕಾರ್ಡ್ ಮುಂದಿಡುವ ಮೂಲಕ ಕ್ಷೇತ್ರದ ಜನರನ್ನು ತಲುಪುವ ಕಾರ್ಯಕ್ಕೆ ಕೈಹಾಕಿದೆ. ಇದರ ಭಾಗವಾಗಿ ಕ್ಷೇತ್ರದಲ್ಲಿ ಸೋನಿಯಾ ಗಾಂಧಿ ಕಾಣೆಯಾಗಿದ್ದಾರೆ ಎಂದು ಬಿಂಬಿಸಲು ಕಂದೀಲು ಹಿಡಿದು ಬಿಜೆಪಿ ಕಾರ್ಯಕರ್ತರು ಹುಡುಕಾಟ ನಡೆಸುವ ರಾಜಕೀಯ ತಂತ್ರಕ್ಕೆ ಮುಂದಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಹಾಲಿ ಬಿಜೆಪಿ ಸಂಸದರಿಲ್ಲದ 14 ಸ್ಥಾನಗಳನ್ನೂ ಮುಂದಿನ ಗೆಲ್ಲಲು ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ.
ಬಿಜೆಪಿ ರಾಜ್ಯ ವಕ್ತಾರ ವಾಜಪೇಯಿ ಪ್ರತಿಕ್ರಿಯಿಸಿ, ''2019ರಲ್ಲಿ ಪಕ್ಷ ಕಳೆದುಕೊಂಡ 14 ಸ್ಥಾನಗಳ ಬಗ್ಗೆ ವಿಶೇಷ ಕಾರ್ಯತಂತ್ರ ರೂಪಿಸಲಾಗಿದೆ. ಇದಕ್ಕಾಗಿ ಹಾಲಿ ಸಂಸದರು ತಮ್ಮ ಕೆಲಸದಲ್ಲಿ ಹೇಗೆ ವಿಫಲರಾಗಿದ್ದಾರೆ ಎಂದು ಜನತೆಗೆ ತಿಳಿಸುವ ರಿಪೋರ್ಟ್ ಕಾರ್ಡ್ ಸಿದ್ಧಪಡಿಸಲಾಗಿದೆ. ಸಂಸದರ ವೈಫಲ್ಯವನ್ನು ಪ್ರತಿ ಮನೆಗೆ ತಲುಪಿಸಲಾಗುತ್ತಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಡಬಲ್ ಎಂಜಿನ್ ಸರ್ಕಾರವನ್ನು ಬೆಂಬಲಿಸಲು ಜನರಿಗೆ ತಿಳಿ ಹೇಳಲಾಗುತ್ತದೆ. ಈ ಕ್ಷೇತ್ರಗಳ ಉಸ್ತುವಾರಿಯನ್ನು ರಾಜ್ಯ ಸಚಿವರಿಗೆ ವಹಿಸಲಾಗಿದೆ. 84 ವಿಸ್ತಾರಕರನ್ನು ನೇಮಿಸಲಾಗಿದೆ. ಪಕ್ಷದ ಗೆಲುವಿಗೆ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದ್ದೇವೆ'' ಎಂದರು.
ಇದನ್ನೂ ಓದಿ: ಮಿಜೋರಾಂ: ಸ್ಕೂಟರ್ ಟ್ಯಾಕ್ಸಿಯಲ್ಲಿ ಸಂಚರಿಸಿದ ರಾಹುಲ್ ಗಾಂಧಿ; ಜನರ ಶಿಸ್ತಿಗೆ ಮೆಚ್ಚುಗೆ