ಹೈದರಾಬಾದ್: ತೆಲಂಗಾಣದಲ್ಲಿ ಆಡಳಿತ ಪಕ್ಷ ಟಿಆರ್‌ಎಸ್ ಹಾಗೂ ಬಿಜೆಪಿ ನಡುವಿನ ವಾಕ್ಸಮರ ಮುಂದುವರೆದಿದ್ದು, ಬಿಜೆಪಿ ಬಕ್ವಾಸ್ ಜುಮ್ಲಾ ಪಾರ್ಟಿ ಎಂದು ಟಿಆರ್‌ಎಸ್ ಕಾರ್ಯಾಧ್ಯಕ್ಷ ಹಾಗೂ ಸಚಿವ ಕೆ ಟಿ ರಾಮ ರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೈದಾರಾಬಾದ್‌ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಡಿ, ಎನ್‌ಐಎ, ಸಿಬಿಐಗಳಂತಹ ತನಿಖಾ ಸಂಸ್ಥೆಗಳನ್ನು ಎನ್‌ಡಿಎ ಪಾಲುದಾರ ಸಂಸ್ಥೆಗಳನ್ನಾಗಿ ಬಿಜೆಪಿ ಮಾಡಿದೆ. ಏಳೂವರೆ ವರ್ಷದಲ್ಲಿ ಕೇಂದ್ರದಲ್ಲಿ ಬಿಜೆಪಿ ಏನೂ ಮಾಡಿಲ್ಲ. ಅಭಿವೃದ್ಧಿ ಮಾಡಿದ್ದೇವೆ ಎಂದು ಸುಳ್ಳು ಹೇಳಿ ಮತ ಪಡೆಯುತ್ತಾರೆ. ಬಿಜೆಪಿ ಎಂದರೆ ಭಾರತೀಯ ಜನತಾ ಪಾರ್ಟಿ ಅಲ್ಲ ಅದೊಂದು ಬಕ್ವಾಸ್ ಜುಮ್ಲಾ ಪಾರ್ಟಿ(ಕಸ ಮತ್ತು ಸುಳ್ಳು ಭರವಸೆಗಳ ಪಕ್ಷ) ಎಂದು ಕಿಡಿಕಾರಿದ್ದಾರೆ.
2022ರ ವೇಳೆಗೆ ರೈತರ ಆದಾಯ ದ್ವಿಗುಣಗೊಳಿಸುವುದಾಗಿ ಪ್ರಧಾನಿ ಮೋದಿ ಭರವಸೆ ನೀಡಿ ರೈತ ವಿರೋಧಿಯಾಗಿದ್ದಾರೆ. ಪಂಜಾಬ್‌ನಲ್ಲಿ ಪ್ರಧಾನಿ ಮೋದಿ ಅವರಿಗೆ ರೈತರೇ ಅಡ್ಡಗಾಲು ಹಾಕಿದ್ದು ಬಯಲಾಗಿದೆ. ಇದರಿಂದ ಅವರು 20 ನಿಮಿಷಗಳ ಕಾಲ ರಸ್ತೆಯಲ್ಲೇ ಇರಬೇಕಾಯಿತು ಎಂದು ಟೀಕಿಸಿದ್ದಾರೆ.
2022ರ ವೇಳೆಗೆ ಪ್ರತಿಯೊಬ್ಬ ಭಾರತೀಯನಿಗೂ ಮನೆ ಸಿಗಲಿದೆ ಎಂದು ಮೋದಿ ಹೇಳಿದ್ದಾರೆ. ಇಲ್ಲಿಯವರೆಗೆ ದೇಶದ ಎಲ್ಲರಿಗೂ ಮನೆ ಸಿಕ್ಕಿದೆಯೇ ಎಂದು ಕೆಟಿಆರ್ ಪ್ರಶ್ನಿಸಿದರು. ತೆಲಂಗಾಣ ಸೇರಿದಂತೆ 28 ರಾಜ್ಯಗಳ ಜನರಿಗೆ ವಸತಿ ನೀಡುವ ಸುಳ್ಳು ಭರವಸೆಯನ್ನು ನೀಡಿದ್ದರು ಎಂದು ಕೆಟಿಆರ್ ವಾಗ್ದಾಳಿ ನಡೆಸಿದರು.
ಬಿಜೆಪಿ ತೆಲಂಗಾಣ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್ ಅವರ ಬಂಧನವನ್ನು ಖಂಡಿಸಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಉಪಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದ ಹಿನ್ನೆಲೆಯಲ್ಲಿ ಸಿಎಂ ಕೆಸಿಆರ್ ಮಾನಸಿಕ ಸಮತೋಲನವನ್ನು ಕಳೆದುಕೊಂಡಿದ್ದಾರೆ. ಇವರ ಆಡಳಿತವು ಪ್ರಜಾಪ್ರಭುತ್ವದ ವಿರೋಧಿ ಹಾಗೂ ಅತ್ಯಂತ ಭ್ರಷ್ಟವಾಗಿದೆ ಎಂದು ಆರೋಪಿಸಿದ್ದರು.
ಇದಕ್ಕೆ ತಿರುಗೇಟು ನೀಡಿರುವ ಸಚಿವ ಕೆಟಿಆರ್, ಇಲ್ಲಿಯವರೆಗೆ ನಡ್ಡಾ ವಿದ್ಯಾವಂತ ಎಂಬ ಅಭಿಪ್ರಾಯವನ್ನು ಹೊಂದಿದ್ದೆ. ಆದರೆ ನಿನ್ನೆ ಅವರ ಹೇಳಿಕೆಯ ನಂತರ ಕೀಳು ಮಟ್ಟದ ಟೀಕೆ ಮಾಡುವ ಬಂಡಿ ಸಂಜಯ್ ಕುಮಾರ್ ಹಾಗೂ ಜೆ ಪಿ ನಡ್ಡಾ ಅವರ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂಬುದು ಅರ್ಥವಾಯಿತು ಎಂದಿದ್ದಾರೆ.
ಇದನ್ನೂ ಓದಿ: ತೆಲಂಗಾಣ ಬಿಜೆಪಿ ಅಧ್ಯಕ್ಷ ಸಂಜಯ್ ಬಂಧನ; ಕೆಸಿಆರ್ ಸರ್ಕಾರದ ವಿರುದ್ಧ ಜೆಪಿ ನಡ್ಡಾ ಆಕ್ರೋಶ