ಕೋಯಿಕ್ಕೋಡ್ (ಕೇರಳ): ಕೋಯಿಕ್ಕೋಡ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಸಭ್ಯವಾಗಿ ವರ್ತಿಸಿದ ಆರೋಪದ ಮೇರೆಗೆ ಬಿಜೆಪಿ ಮುಖಂಡ ಹಾಗೂ ನಟ ಸುರೇಶ್ ಗೋಪಿ ವಿರುದ್ಧ ಮಹಿಳಾ ಪತ್ರಕರ್ತೆ ಕಾನೂನು ಕ್ರಮ ಜರುಗಿಸಲು ಮುಂದಾಗಿದ್ದಾರೆ.
ನಿನ್ನೆ ಸಂಜೆ (27.10.23) ಕೋಯಿಕ್ಕೋಡ್‌ನಲ್ಲಿ ಮಾಧ್ಯಮಗೋಷ್ಠಿ ಇತ್ತು. ಆ ವೇಳೆ, ಸುರೇಶ್ ಗೋಪಿ ಅವರು ಮಹಿಳಾ ಪತ್ರಕರ್ತೆ ವಿರುದ್ಧ ಅನುಚಿತವಾಗಿ ವರ್ತಿಸಿದ್ದಾರೆಂಬ ಗಂಭೀರ ಆರೋಪ ಕೇಳಿಬಂದಿದೆ. ಪ್ರಶ್ನೆ ಕೇಳಿದ ಪತ್ರಕರ್ತೆಯ ಭುಜದ ಮೇಲೆ ಸುರೇಶ್ ಗೋಪಿ ಕೈ ಹಾಕಿದ್ದಾರೆ. ಪತ್ರಕರ್ತೆ ದೂರ ಸರಿದರೂ ಕೂಡ ಸುರೇಶ್ ಗೋಪಿ ತಮ್ಮ ಈ ವರ್ತನೆಯನ್ನು ಮುಂದುವರಿಸಿದ್ದಾರೆ. ವಿಡಿಯೋದಲ್ಲಿ ಈ ವರ್ತನೆ ಸ್ಪಷ್ಟವಾಗಿ ಕಂಡಿದೆ. ಪತ್ರಕರ್ತೆ ಈ ಸಂಬಂಧ ಕಾನೂನು ಕ್ರಮ ಜರುಗಿಸುವುದಾಗಿ ಹೇಳಿದ್ದಾರೆ. ಮಾಧ್ಯಮ ಸಂಸ್ಥೆ ಕೂಡ ಕಾನೂನು ಕ್ರಮ ಸೇರಿದಂತೆ ಮುಂದಿನ ಎಲ್ಲಾ ಹೆಜ್ಜೆಗಳಿಗೆ ತಮ್ಮ ಬೆಂಬಲ ನೀಡುವುದಾಗಿ ತಿಳಿಸಿದೆ.
ಕ್ಷಮೆಯಾಚನೆಗೆ ಒತ್ತಾಯ: ಕೇರಳದ ಕಾರ್ಯನಿರತ ಪತ್ರಕರ್ತರ ಒಕ್ಕೂಟ (The Kerala Union of Working Journalists)ವು, ಶುಕ್ರವಾರದಂದು ಪತ್ರಕರ್ತೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ನಟ, ರಾಜಕಾರಣಿ ಸುರೇಶ್ ಗೋಪಿ ಬೇಷರತ್ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದೆ. ಕೆಯುಡಬ್ಲ್ಯುಜೆ ಹೇಳಿಕೆಯಲ್ಲಿ, ಬಿಜೆಪಿ ನಾಯಕನ ಈ ವರ್ತನೆ 'ಉದ್ಯೋಗಿ ಮಹಿಳೆಯರಿಗೆ ಮಾಡಿದ ಅವಮಾನ' ಎಂದು ಹೇಳಿದೆ. ಮಾಧ್ಯಮದವರೊಂದಿಗೆ ಮಾತನಾಡುವ ಸಂದರ್ಭ, ಪತ್ರಕರ್ತೆಯ ಜೊತೆ ಅನುಚಿತವಾಗಿ ವರ್ತಿಸಿದ ಸುರೇಶ್ ಗೋಪಿ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಲಾಗುವುದು, ಜೊತೆಗೆ ಇತರ ಸೂಕ್ತ ಕಾನೂನು ಕ್ರಮಗಳನ್ನೂ ಕೈಗೊಳ್ಳಲಾಗುವುದು ಎಂದು ಒಕ್ಕೂಟ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಬಿ.ಸಿ ಪಾಟೀಲ್ 'ಗರಡಿ' ಚಿತ್ರಕ್ಕೆ ಚಾಲೆಂಜಿಂಗ್ ಸ್ಟಾರ್ ಸಾಥ್ - ಟ್ರೇಲರ್ ಅನಾವರಣಗೊಳಿಸಲಿದ್ದಾರೆ ದರ್ಶನ್
ಆನ್‌ಲೈನ್‌ನಲ್ಲಿ ಈ ಸಂಬಂಧ ವಿಡಿಯೋಗಳು ವೈರಲ್ ಆಗುತ್ತಿದೆ. ಪತ್ರಕರ್ತೆಯ ಪ್ರಶ್ನೆ ಸುರೇಶ್ ಗೋಪಿ ಅವರಿಗೆ ಹಿಡಿಸಿಲ್ಲ. ಆಗ ಅವರು ಪತ್ರಕರ್ತೆ ಭುಜದ ಮೇಲೆ ತಮ್ಮ ಕೈ ಇರಿಸಿದ್ದಾರೆ. ಪತ್ರಕರ್ತೆ ಎರಡು ಬಾರಿ ನಟನ ಕೈಯನ್ನು ಸರಿಸಿದ್ದಾರೆ. ಪದೇ ಪದೆ ಅವರ ಕೈಯನ್ನು ತಮ್ಮ ಭುಜದಿಂದ ದೂರ ತಳ್ಳಿದ್ದಾರೆ ಎಂಬುದು ವೈರಲ್ ವಿಡಿಯೋಗಳಲ್ಲಿ ಸ್ಪಷ್ಟವಾಗಿದೆ ಎಂದು ಒಕ್ಕೂಟ ತಿಳಿಸಿದೆ.
ಇದನ್ನೂ ಓದಿ: ಆದಿತ್ಯ ಅನನ್ಯಾ ಡಿನ್ನರ್ ಡೇಟ್: ಫೋಟೋ, ವಿಡಿಯೋಗಳು ವೈರಲ್!
ಸುರೇಶ್ ಗೋಪಿ ಕ್ಷಮೆಯಾಚನೆ: ಈ ಬೆಳವಣಿಗೆಗಳ ಬಳಿಕ ಸುರೇಶ್ ಗೋಪಿ ತಮ್ಮ ಫೇಸ್ ಬುಕ್ ಖಾತೆ ಮೂಲಕ ಕ್ಷಮೆಯಾಚಿಸಿದ್ದಾರೆ. ಪತ್ರಕರ್ತರನ್ನು ಪ್ರೀತಿಯಿಂದ ನಡೆಸಿಕೊಂಡಿದ್ದು, ಮಗುವಿಗೆ ಯಾವುದೇ ರೀತಿಯ ನೋವಾಗಿದ್ದರೆ ಅಥವಾ ಮಾನಸಿಕ ತೊಂದರೆಯಾಗಿದ್ದರೆ ಕ್ಷಮೆಯಾಚಿಸುತ್ತೇನೆ ಎಂದು ಸುರೇಶ್ ಗೋಪಿ ತಮ್ಮ ಅಧಿಕೃತ ಫೇಸ್ ಬುಕ್ನಲ್ಲಿ ಬರೆದುಕೊಂಡಿದ್ದಾರೆ. ಕ್ಷಮೆಯಾಚನೆನೆಗೆ ನಿಲ್ಲುತ್ತಾ ಅಥವಾ ಕಾನೂನು ಪ್ರಕ್ರಿಯೆ ಮುಂದುವರಿಯುತ್ತಾ ಎಂಬುದನ್ನು ಕಾದು ನೋಡಬೇಕಿದೆ.