ನವದೆಹಲಿ: ಮುಂದೊಂದು ದಿನ ದೆಹಲಿಯ ಕೆಂಪುಕೋಟೆ ಮೇಲೆ ತ್ರಿವರ್ಣ ಧ್ವಜದ ಬದಲಾಗಿ ಕೇಸರಿ ಧ್ವಜ ಹಾರಿಸುತ್ತೇವೆ ಎಂಬ ಕರ್ನಾಟಕದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರ ಹೇಳಿಕೆಯನ್ನು ಸ್ವತಃ ಬಿಜೆಪಿ ರಾಷ್ಟ್ರಾಧ್ಯಕ್ಷರೇ ಖಂಡಿಸಿದ್ದಾರೆ.
ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜೆ.ಪಿ.ನಡ್ಡಾ, ಕೇಸರಿ ಧ್ವಜದ ಕುರಿತು ಅವರ ಕಾಮೆಂಟ್‌ಗಳಿಗಾಗಿ ನಾನು ಈಶ್ವರಪ್ಪ ಅವರನ್ನು ಕರೆದು ಛೀಮಾರಿ ಹಾಕಿದ್ದೇನೆ. ಕೇಸರಿ ಬಾವುಟದ ಬಗ್ಗೆ ಈಶ್ವರಪ್ಪ ಅವರ ಬೇಜವಾಬ್ದಾರಿ ಹೇಳಿಕೆಯನ್ನು ಬಿಜೆಪಿ ಯಾವುದೇ ಕಾರಣಕ್ಕೂ ಸಹಿಸಲ್ಲ ಎಂದು ಹೇಳಿದರು.
ನಾವು (ಬಿಜೆಪಿ) ಅಭಿವೃದ್ಧಿ ವಿಷಯಗಳ ಮೇಲೆ ಚುನಾವಣೆಗಳನ್ನು ಎದುರಿಸುತ್ತಿದ್ದೇವೆ. ಆದರೆ ಕರ್ನಾಟಕ ಕಾಂಗ್ರೆಸ್ ರಾಜ್ಯದಲ್ಲಿ ಹಿಜಾಬ್ ವಿವಾದಕ್ಕೆ ಉತ್ತೇಜನ ನೀಡುತ್ತಾ ಅದರಿಂದ ರಾಜಕೀಯ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿದೆ ಎಂದು ನಡ್ಡಾ ಇದೇ ವೇಳೆ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಈಶ್ವರಪ್ಪ ರಾಜೀನಾಮೆಗೆ ಕಾಂಗ್ರೆಸ್ ಪಟ್ಟು : ವಿಧಾನಸಭೆ ಅಧಿವೇಶನ ಮಾರ್ಚ್ 4ರವರೆಗೆ ಮುಂದೂಡಿಕೆ
ಕೆಂಪುಕೋಟೆ ಮೇಲೆ ತ್ರಿವರ್ಣ ಧ್ವಜ ಬದಲಾಗಿ ಕೇಸರಿ ಧ್ವಜ ಹಾರಿಸುತ್ತೇವೆ ಎಂಬ ಈಶ್ವರಪ್ಪರ ಹೇಳಿಕೆಯನ್ನು ಕರ್ನಾಟಕ ಕಾಂಗ್ರೆಸ್ ತೀವ್ರವಾಗಿ ಖಂಡಿಸಿದ್ದು, ಸಚಿವರ ರಾಜೀನಾಮೆಗೆ ಆಗ್ರಹಿಸಿ ಸದನದಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದೆ.