ನವದೆಹಲಿ / ಜೈಪುರ: ಭಾರತೀಯ ಚುನಾವಣಾ ಆಯೋಗದ ಇತ್ತೀಚಿನ ಮಾಹಿತಿ ಪ್ರಕಾರ, ರಾಜಸ್ಥಾನದಲ್ಲಿ ಭಾರತೀಯ ಜನತಾ ಪಕ್ಷ ಬಹುಮತದ ಗಡಿ ದಾಟಿದೆ. ರಾಜಸ್ಥಾನದಲ್ಲಿ ಒಟ್ಟು 200 ವಿಧಾನಸಭಾ ಕ್ಷೇತ್ರಗಳಿವೆ. ಅದರಲ್ಲಿ 199 ಕ್ಷೇತ್ರಗಳಿಗೆ ಚುನಾವಣೆ ನಡೆದಿದೆ. ಸದ್ಯ ರಾಜಸ್ಥಾನದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಮತ ಎಣಿಕೆ ಕಾರ್ಯ ಮುಂದುವರೆದಿದ್ದು, ಭಾರತೀಯ ಜನತಾ ಪಕ್ಷ ಮುನ್ನಡೆ ಸಾಧಿಸಿದೆ.
ಜೈಪುರದ ಪಕ್ಷದ ಕಚೇರಿಯ ಹೊರಗೆ ಬಿಜೆಪಿ ಕಾರ್ಯಕರ್ತರು ಡೋಲು ಬಾರಿಸಿ, ಕುಣಿದು ಕುಪ್ಪಳಿಸಿ ಸಂಭ್ರಮಾಚರಣೆ ನಡೆಸುತ್ತಿದ್ದಾರೆ . ರಾಜಸ್ಥಾನ ಒಟ್ಟು 199 ಸ್ಥಾನಗಳ ಪೈಕಿ, 113 ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ 69 ಸ್ಥಾನಗಳಲ್ಲಷ್ಟೇ ಮುನ್ನಡೆಯಲ್ಲಿದೆ.
ಆರಂಭಿಕ ಅಪ್ಡೇಟ್ಸ್ ಪ್ರಕಾರ ರಾಜಸ್ಥಾನದಲ್ಲಿ ಬಿಜೆಪಿ ಮುನ್ನಡೆ ಸಾಧಿಸುತ್ತಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಸಿ.ಪಿ ಜೋಶಿ ತಿಳಿಸಿದ್ದಾರೆ. ಈ ಮುನ್ನಡೆ ಮುಂದುವರಿದಿದೆ. ಬಿಜೆಪಿ ಸ್ಥಾನ ತಗ್ಗಿಲ್ಲ. ನಾವು 135 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ತಿಳಿಸಿದ್ದಾರೆ. ಇದಲ್ಲದೇ, ಭಾರತ್ ಆದಿವಾಸಿ ಪಕ್ಷ ಎರಡು ಸ್ಥಾನಗಳಲ್ಲಿ, ಬಹುಜನ್ ಸಮಾಜ್ ಪಾರ್ಟಿ ಮೂರು ಸ್ಥಾನಗಳಲ್ಲಿ , ಸ್ವತಂತ್ರ್ಯ ಅಭ್ಯರ್ಥಿಗಳು ಏಳು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.
RAJASTHAN 199/199
PARTY | BJP | INC | OTH |
LEAD | 116 | 68 | 14 |
WON | 1 | 0 | 0 |
CHANGE | +44 | -32 | -13 |
ಇಲ್ಲಿ ಕಳೆದ 40 ಕ್ಕೂ ಹೆಚ್ಚು ವರ್ಷಗಳಿಂದ ಒಮ್ಮೆ ಆರಿಸಿ ಬಂದ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬಂದಿಲ್ಲ. ಅದು ಈ ಬಾರಿಯೂ ಪುನರಾವರ್ತನೆ ಆಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೂರು ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಬಹುಮತಕ್ಕೆ ಒಂದು ಸ್ಥಾನ ಕಡಿಮೆ ಇತ್ತು. ಆರು ಜನ ಬಿಎಸ್ಪಿ ಶಾಸಕರ ಬೆಂಬಲದೊಂದಿಗೆ ಅಶೋಕ್ ಗೆಹ್ಲೋಟ್ ಸಿಎಂ ಆಗಿ ಅಧಿಕಾರ ವಹಿಸಿಕೊಂಡಿದ್ದರು. ಆ ಬಳಿಕ ಪಕ್ಷದಲ್ಲಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಹಾಗೂ ಡಿಸಿಎಂ ಆಗಿದ್ದ ಸಚಿನ್ ಪೈಲಟ್ ಬಂಡಾಯ ಎದ್ದಿದ್ರು.
ಇದನ್ನೂ ಓದಿ: ನಾನು ಟ್ರೆಂಡ್ ನೋಡಿಲ್ಲ, ಮಧ್ಯಪ್ರದೇಶ ಮತದಾರರ ಮೇಲೆ ನಂಬಿಕೆ ಇದೆ: ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್
ಆದರೆ ಅಶೋಕ್ ಗೆಹ್ಲೋಟ್ ತಮ್ಮ ಸ್ಥಾನ ಬಿಟ್ಟುಕೊಡಲು ನಿರಾಕರಿಸಿದ್ದರು. ಅದನ್ನೆಲ್ಲ ಸರಿ ಮಾಡಿಕೊಂಡು ಚುನಾವಣೆ ಎದುರಿಸಿದ್ದ ಕಾಂಗ್ರೆಸ್ ಹಲವು ಗ್ಯಾರಂಟಿಗಳನ್ನು ನೀಡಿತ್ತಾದರೂ ಅಧಿಕಾರಕ್ಕೆ ಮರಳುವಲ್ಲಿ ವಿಫಲವಾಗಿದೆ. ಆಂತರಿಕ ಬಂಡಾಯ ಪಕ್ಷಕ್ಕೆ ದೊಡ್ಡ ಹೊಡೆತ ನೀಡಿದೆ ಎಂದು ಹೇಳಲಾಗುತ್ತಿದೆ. ಹಲವು ಜನಪ್ರೀಯ ಯೋಜನೆಗಳನ್ನು ಜಾರಿಗೆ ತಂದಾಗ್ಯೂ ಹಾಗೂ ಆರು ಗ್ಯಾರಂಟಿಗಳನ್ನು ಘೋಷಣೆ ಮಾಡಲಾಗಿದ್ದರೂ ರಾಜಸ್ಥಾನದಲ್ಲಿ ಪುನಃ ಅಧಿಕಾರಕ್ಕೆ ಬರುವಲ್ಲಿ ಅಶೋಕ್ ಗೆಹ್ಲೋಟ್ ವಿಫಲರಾಗಿದ್ದಾರೆ.
ಇದನ್ನೂ ಓದಿ: ಚುನಾವಣಾ ಫಲಿತಾಂಶ ಬಿಜೆಪಿಗೆ ಸಂತಸ ತಂದಿದೆ: ಪ್ರತಿಪಕ್ಷ ನಾಯಕ ಆರ್ ಅಶೋಕ್