ಕೋಲ್ಕತ್ತಾ: ಪಶ್ಚಿಮ ಬಂಗಾಳದ ಕಲಿಯಗಂಜ್‌ನ ಬಿಜೆಪಿ ಅಭ್ಯರ್ಥಿ ಸೌಮೆನ್ ರಾಯ್ ಅವರ ಪತ್ನಿ ಶರ್ಬರಿ ಸಿಂಗ್ ರಾಯ್, ನನ್ನ ಪತಿ ಜನಪ್ರತಿನಿಧಿಯಾಗಲು ಅರ್ಹನಲ್ಲ. ಹೀಗಾಗಿ ನನ್ನ ಪತಿಗೆ ಮತ ಹಾಕಬೇಡಿ ಎಂದು ಮತದಾರರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ತಮ್ಮ ಮಗಳ ಜೊತೆಗೆ ಸುದ್ದಿಗೋಷ್ಠಿ ನಡೆಸಿರುವ ಸೌಮೆನ್ ರಾಯ್ ಅವರ ಪತ್ನಿ ಶರ್ಬರಿ ಸಿಂಗ್, ಪತಿ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದಾರೆ. ಅವರು ಕಲಿಯಗಂಜ್ನಲ್ಲಿ ಉದ್ಯೋಗದ ಬಗ್ಗೆ ಸುಳ್ಳು ಭರವಸೆ ನೀಡುವ ಮೂಲಕ ಹಣವನ್ನು ಸಂಗ್ರಹಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಸೌಮೆನ್ ರಾಯ್ ಜನಪ್ರತಿನಿಧಿಯಾಗಲು ಅರ್ಹರಲ್ಲ ಎಂದು ದೂರಿದ್ದಾರೆ.
ಕಲಿಯಗಂಜ್‌ಗೆ ಸೌಮೆನ್ ರಾಯ್ ಅವರ ಉಮೇದುವಾರಿಕೆಯನ್ನು ಘೋಷಿಸಿದಾಗಿನಿಂದ ವಿವಾದ ಭುಗಿಲೆದ್ದಿದೆ. ಶೆರ್ಬರಿ ರಾಯ್ ಅವರ ಆರೋಪದ ನಂತರ ಕಲಿಯಗಂಜ್‌ನಲ್ಲಿಯೂ ಪ್ರತಿಭಟನೆಗಳು ಪ್ರಾರಂಭವಾಗಿವೆ. ಪಕ್ಷದ ಕೆಲವು ಮುಖಂಡರು ಮತ್ತು ಕಾರ್ಯಕರ್ತರು ಅವರ ಉಮೇದುವಾರಿಕೆಯನ್ನು ಸ್ವೀಕರಿಸದಂತೆ ಎಚ್ಚರಿಕೆ ನೀಡಿದ್ದಾರೆ. ಸೌಮೆನ್ ರಾಯ್ ನಾಮಪತ್ರ ಸಲ್ಲಿಕೆ ವೇಳೆ ಪಕ್ಷದ ಕಾರ್ಯಕರ್ತರು ಉಪವಾಸ ಕುಳಿತು ವಿವಾದ ಭುಗಿಲೆದ್ದಿತ್ತು. ಆದರೆ ಪಕ್ಷದ ನಾಯಕರು ಮಧ್ಯಸ್ಥಿಕೆ ವಹಿಸಿ ಪರಿಸ್ಥಿತಿ ತಿಳಿಗೊಳಿಸಿದ್ದರು.
ಉತ್ತರ ದಿನಾಜ್‌ಪುರ ಪ್ರೆಸ್ ಕ್ಲಬ್‌ನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ರಾಯ್ ಅವರ ಪತ್ನಿ, ಸೌಮೆನ್ ರಾಯ್ ಅವರನ್ನು ಬದಲಿಸುವಂತೆ ನಾನು ಬಿಜೆಪಿಯ ಕೇಂದ್ರ ಮತ್ತು ರಾಜ್ಯ ನಾಯಕರಿಗೆ ಪದೇ ಪದೆ ಮನವಿ ಮಾಡಿಕೊಂಡಿದ್ದೆ ಎಂದು ಹೇಳಿದರು. ಆದರೆ ಕೆಲವು ಕಾರಣಗಳಿಂದ ಅವರನ್ನೇ ಅಭ್ಯರ್ಥಿಯಾಗಿ ನಿಲ್ಲಿಸಿದ್ದಾರೆ. ಹಾಗಾಗಿ ಸೌಮೆನ್ ರಾಯ್‌ಗೆ ಮತ ಹಾಕುವುದು ನನಗೆ ಇಷ್ಟವಿಲ್ಲ. ಇನ್ನು ನನಗೆ ಯಾವುದೇ ರಾಜಕೀಯ ಹಿನ್ನೆಲೆ ಇಲ್ಲ ಮತ್ತು ನಾನು ಯಾವುದೇ ರಾಜಕೀಯ ಪಕ್ಷದೊಂದಿಗೆ ಸಂಬಂಧ ಹೊಂದಿಲ್ಲ. ನಾನು ರಾಜಕೀಯೇತರ ಮಹಿಳಾ ಸಂಘಟನೆಯವಳು. ನಾನು ಸೌಮೆನ್ ರಾಯ್ ವಿರುದ್ಧ ಪ್ರಚಾರ ಮಾಡುತ್ತೇನೆ ಎಂದು ಶರ್ಬರಿ ಸಿಂಗ್ ಹೇಳಿದ್ದಾರೆ.