ಅಸನ್ಸೋಲ್ (ಪಶ್ಚಿಮ ಬಂಗಾಳ): ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ವಿಜಯಶಾಲಿಯಾಗಿ ಹೊರಹೊಮ್ಮಿದ ಬೆನ್ನಲ್ಲೇ ಬಿಜೆಪಿ ಹಾಗೂ ಎಬಿವಿಪಿ ಕಚೇರಿಯನ್ನು ಟಿಎಂಸಿ ಕಾರ್ಯಕರ್ತರು ಧ್ವಂಸ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಟಿಎಂಸಿ ಗೂಂಡಾಗಳು ಅಸನ್ಸೋಲ್‌ನಲ್ಲಿರುವ ನಮ್ಮ ಕಚೇರಿ ಧ್ವಂಸಗೊಳಿಸಿದ್ದಲ್ಲದೇ ಹಿಂದೂ ದೇವರ ಮತ್ತು ಸ್ವಾತಂತ್ರ್ಯ ಹೋರಾಟಗಾರರ ವಿಗ್ರಹಗಳನ್ನು ಉದ್ದೇಶಪೂರ್ವಕವಾಗಿ ಪುಡಿಗಟ್ಟಿದ್ದಾರೆ ಎಂದು ಬಿಜೆಪಿ ಹೇಳಿದೆ.
ಕೋಲ್ಕತ್ತಾದಲ್ಲಿರುವ ನಮ್ಮ ಕಚೇರಿಗೆ ನುಗ್ಗಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪಕ್ಷದ ಗೂಂಡಾಗಳು ನಮ್ಮ ಕಾರ್ಯಕರ್ತರೊಂದಿಗೆ ವಾಗ್ವಾದ ನಡೆಸಿ, ಕಚೇರಿ ಧ್ವಂಸಗೊಳಿಸಿದ್ದಾರೆ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಆರೋಪಿಸಿದೆ.
ಇದನ್ನೂ ಓದಿ: ಗುಂಡಿಟ್ಟು ಬಿಜೆಪಿ ಕಾರ್ಯಕರ್ತನ ಹತ್ಯೆ
"ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿಯ ಸೋಲು ಟಿಎಂಸಿ ಕಾರ್ಯಕರ್ತರಿಗೆ ತನ್ನ ನಷ್ಟಕ್ಕೆ ಕಾರಣವಾದವರ ಬಗ್ಗೆ ತೀವ್ರ ಅಸಮಾಧಾನ ಉಂಟುಮಾಡಿದೆ. ಅಂತಹ ದೇಶದ್ರೋಹಿಗಳಿಗೆ ದೀರ್ಘಕಾಲ ಬಂಗಾಳದಲ್ಲಿ ವಾಸಿಸಲು ಅವಕಾಶ ನೀಡುವುದಿಲ್ಲ" ಎಂದು ಎಬಿವಿಪಿ ಕಿಡಿಕಾರಿದೆ.
ಚುನಾವಣಾ ಫಲಿತಾಂಶ ಬಂದ 24 ಗಂಟೆಗಳಲ್ಲಿ, ಅನೇಕ ಬಿಜೆಪಿ ಕಾರ್ಯಕರ್ತರು ಹತ್ಯೆಯಾಗಿದ್ದಾರೆ. ಅನೇಕ ಕಾರ್ಯಕರ್ತರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪಕ್ಷದ ಅನೇಕ ಕಾರ್ಯಕರ್ತರ ಮನೆ ಮತ್ತು ಅಂಗಡಿಗಳು ಧ್ವಂಸವಾಗಿವೆ. ಮಮತಾ ಬ್ಯಾನರ್ಜಿ ಸೋಲು ಮತ್ತು ತೃಣಮೂಲ ಕಾಂಗ್ರೆಸ್ ಗೆಲುವನ್ನು ಹಿಂಸೆ ಮತ್ತು ರಕ್ತದಿಂದ ಆಚರಿಸಲು ಟಿಎಂಸಿ ಪ್ರಾರಂಭಿಸಿದೆ. ಇದನ್ನು ಖಂಡಿಸುತ್ತೇವೆ ಎಂದು ಬಿಜೆಪಿ ತಿಳಿಸಿದೆ.
ಇದನ್ನೂ ಓದಿ: ಸಿಎಂ ಹುದ್ದೆಗೆ ಮಮತಾ ರಾಜೀನಾಮೆ; ಮೇ. 5ರಂದು ಮೂರನೇ ಬಾರಿಗೆ ದೀದಿ ಪ್ರಮಾಣವಚನ
ರಾಷ್ಟ್ರವ್ಯಾಪಿ ಧರಣಿಗೆ ಬಿಜೆಪಿ ಕರೆ
ಆಡಳಿತಾರೂಢ ಟಿಎಂಸಿ ಸರ್ಕಾರವು ರಾಜ್ಯದಲ್ಲಿ ಪಕ್ಷದ ಕಾರ್ಯಕರ್ತರ ಮೇಲೆ ನಡೆಸಿದ ದೌರ್ಜನ್ಯದ ವಿರುದ್ಧ ಪ್ರತಿಭಟನೆ ನಡೆಸಲು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಇಂದಿನಿಂದ ಎರಡು ದಿನಗಳ ಪಶ್ಚಿಮ ಬಂಗಾಳ ಪ್ರವಾಸ ಕೈಗೊಳ್ಳಲಿದ್ದಾರೆ. ಹಿಂಸಾಚಾರಕ್ಕೆ ಒಳಗಾದ ಬಿಜೆಪಿ ಕಾರ್ಯಕರ್ತರು ಮತ್ತು ಅವರ ಕುಟುಂಬಗಳನ್ನು ಭೇಟಿ ಮಾಡಿ ಪ್ರತಿಭಟನೆ ನಡೆಸಲಿದ್ದಾರೆ. ಮೇ 5 ರಂದು ರಾಷ್ಟ್ರವ್ಯಾಪಿ ಧರಣಿ ನಡೆಸುವುದಾಗಿ ಬಿಜೆಪಿ ಘೋಷಿಸಿದೆ.